ಪುರಾತನ ಶಿಲಾಯುಗ -
ಮಾನವ ಭೂಮಿಯ ಮೇಲೆ ಕಾಣಿಸಿಕೊಂಡ ಆದಿಕಾಲದಲ್ಲಿ ಆಹಾರ ಸಂಗ್ರಹಣಾದಿ ಅವಶ್ಯಕ ಕಾರ್ಯ ನಿರ್ವಹಣೆಗೆ ಕಲ್ಲಿನ ಒರಟಾದ ಆಯುಧಗಳನ್ನು ತಯಾರಿಸಿ ಬಳಸುತ್ತಿದ್ದ ದೀರ್ಘಕಾಲ (ಪೇಲಿಯೋಲಿತಿಕ್ ಏಜ್). ಮಾನವ ಮೊದಮೊದಲು ಇತರ ಪ್ರಾಣಿಗಳಲ್ಲೊಬ್ಬನಾಗಿ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಆಹಾರ ಪದಾರ್ಥಗಳನ್ನು ಅವುಗಳಂತೆಯೇ ಸಂಗ್ರಹಿಸಿ ಜೀವನ ನಡೆಸುತ್ತಿದ್ದ. ಆದರೆ ಮಾನವನನ್ನು ಇತರ ಪ್ರಾಣಿಗಳಿಂದ ಬೇರ್ಪಡಿಸಿದ ಲಕ್ಷಣವೆಂದರೆ ಅವು ತಮ್ಮ ರಕ್ಷಣೆ ಮತ್ತು ಆಹಾರ ಸಂಪಾದನೆಗೆ ದೇಹದಲ್ಲಿಯೇ ಸಲಕರಣೆಗಳನ್ನು ಹೊಂದಿದ್ದರೆ, ಮಾನವ ತನ್ನ ಶರೀರಕ್ಕೆ ಸೇರದ ಬಾಹ್ಯ ಆಯುಧ ಉಪಕರಣಗಳಿಂದ ತನ್ನ ಕಾರ್ಯಗಳನ್ನು ಸಾಧಿಸಬೇಕಾಗಿತ್ತು. ಈ ಕಾರಣದಿಂದಲೇ ಮಾನವ ಅವಶ್ಯವಾಗಿ ಆಯುಧೋಪಕರಣಗಳ ತಯಾರಿಕೆಯಲ್ಲಿ ತೊಡಗಿ ಕ್ರಮೇಣ ಗಳಿಸಿದ ವಿವಿಧ ಅನುಭವಗಳಿಂದ ತನ್ನ ಬುದ್ಧಿಶಕ್ತಿಯನ್ನು ಬೆಳೆಸಿಕೊಂಡು ಪ್ರಗತಿಯನ್ನು ಸಾಧಿಸಿದ. ಈ ಪ್ರಗತಿಯ ಅಧ್ಯಯನವೇ ಮಾನವನ ಪ್ರಾಗತಿಹಾಸ, ಅದರಲ್ಲಿ ಸಸ್ಯಮೂಲ ಆಹಾರದ ಸಂಗ್ರಹಣೆಗೆ, ಪ್ರಾಣಿ ಜನ್ಯ ಆಹಾರದ ಬೇಟೆಗಳಿಗೆ ಒರಟಾದ ಕಲ್ಲಿನ ಆಯುಧಗಳನ್ನು ಮಾನವ ಉಪಯೋಗಿಸುತ್ತಿದ್ದ ಹಂತವನ್ನು ಪುರಾತನ ಶಿಲಾಯುಗವೆಂದು ಕರೆಯಲಾಗಿದೆ. ಮಾನವ ಮೊತ್ತಮೊದಲಿಗೆ ಭೂಮಿಯ ಮೇಲೆ ಕಾಣಿಸಿಕೊಂಡಂದಿನಿಂದ ಅವನು ಆಹಾರ ಸಂಗ್ರಹಣೆಯಿಂದ ಹೊಟ್ಟೆ ಹೊರೆಯುತ್ತಿದ್ದಷ್ಟು ಕಾಲ ಈ ವಿಭಾಗದ ಮಿತಿಗೆ ಸೇರುತ್ತದೆ. ಇದರ ವ್ಯಾಪ್ತಿ ಹತ್ತು ಲಕ್ಷ ವರ್ಷಗಳೆಂದು ಪುರಾತತ್ವಜ್ಞರು ಇತ್ತೀಚಿನವರೆಗೂ ಭಾವಿಸಿದ್ದರು; ಆದರೆ, ಅದು ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳಷ್ಟು ಕಾಲ ವಿಸ್ತರಿಸಿತ್ತೆಂಬುದು ಆಧುನಿಕ ವೈಜ್ಞಾನಿಕ ವಿಧಾನಗಳಿಂದ ಈಗ ತಿಳಿದುಬಂದಿದೆ.

ಮಾನವ ಸಂಸ್ಕøತಿಯನ್ನು ಪ್ರಾಕೃತಿಕ ಜಗತ್ತಿನ ಪರಿಸರದ ಹಿನ್ನೆಲೆಯಲ್ಲಿ ಮಾತ್ರ ಅಭ್ಯಸಿಸುವುದು ಸಾಧ್ಯ. ಮಾನವ ಜೀವನದ ಪ್ರತಿಯೊಂದು ಹಂತದಲ್ಲೂ ಪರಿಸರದ ಪ್ರಭಾವ ಕಂಡುಬರುತ್ತದೆ. ಆಧುನಿಕ ಯುಗದಲ್ಲಿ ನೈಸರ್ಗಿಕ ಶಕ್ತಿಗಳ ಮೇಲೆ ಮಾನವ ಬಹಳಷ್ಟು ಹತೋಟಿ ಸಾಧಿಸಿದ್ದಾಗ್ಯೂ ಪರಿಸರದ ಪ್ರಭಾವದಿಂದ ಅವನ ಪೂರ್ಣ ವಿಮೋಚನೆ ಸಾಧ್ಯವಾಗಿಲ್ಲ. ಆದಿಕಾಲದಲ್ಲಿ ಆಯುಧೋಪಕರಣಗಳ ತಯಾರಿಕೆಯ ತಂತ್ರಗಳು ಅಷ್ಟೇನೂ ಬೆಳೆಯದಿದ್ದಾಗ, ಆಹಾರಗಳಿಗಾಗಿ ಅವನು ನಿಸರ್ಗದ ದಾಸನಾಗಿದ್ದಾಗ ಈ ಪ್ರಭಾವ ಇನ್ನೂ ಬಲವತ್ತರವಾಗಿದ್ದುದು ಸಹಜ. ನಿಸರ್ಗದ ಪ್ರಭಾವಗಳ ಕಟ್ಟಿನಿಂದ ಕ್ರಮೇಣ ಬಿಡುಗಡೆ ಸಾಧಿಸುವ ಕ್ರಮವೇ ಮಾನವನ ಇತಿಹಾಸವೆನ್ನಬಹುದು. ಆದರೆ. ಪೂರ್ಣ ಬಿಡುಗಡೆ ಎಂದಿಗೂ ಸಾಧ್ಯವಾಗದು.

ಭೂವೈಜ್ಞಾನಿಕರು ಭೂಮಿಯ ಇತಿಹಾಸವನ್ನು ಆರ್ಕೆಯೊಜೋóಯಕ್; ಪೇಲಿಯೋeóÉೂೀಯೆಕ್, ಮೆಸೊeóÉೂೀಯಕ್ ಮತ್ತು ಸೆನೋeóÉೂೀಯಕ್ ಎಂಬ ನಾಲ್ಕು ಪರ್ವಗಳಾಗಿ ವಿಂಗಡಿಸಿದ್ದಾರೆ. ಇವುಗಳಲ್ಲಿ ಕೊನೆಯದಾದ ಸೆನೋeóÉೂೀಯಕ್ ಪರ್ವವನ್ನು ಪ್ಲಿಯೋಸೀನ್ ಮತ್ತು ಪ್ಲೀಸ್ಟೊಸೀನ್ ಎಂಬ ಎರಡು ಯುಗಗಳಾಗಿ ವಿಂಗಡಿಸಲಾಗಿದೆ. ಮಾನವನ ಮೊದಮೊದಲ ಚಟುವಟಿಕೆಗಳು ಪ್ಲೀಸ್ಟೊಸೀನ್ ಯುಗದಲ್ಲಿ ಕಂಡುಬರುತ್ತವೆ. ಈ ಯುಗದುದ್ದಕ್ಕೂ ರೂಢಿಯಲ್ಲಿದ್ದ ಸಂಸ್ಕøತಿಗೆ ಪುರಾತನ ಶಿಲಾಯುಗ ಸಂಸ್ಕøತಿ ಎಂದು ಹೆಸರಾಗಿದೆ. ಪ್ಲೀಸ್ಟೊಸೀನ್ ಯುಗದ ವೈಶಿಷ್ಟ್ಯವೆಂದರೆ ಆವರೆಗೂ ಹೆಚ್ಚು ಕಡಿಮೆ ಒಂದೇ ರೀತಿಯಾಗಿದ್ದ ವಾಯುಗುಣ ಆ ಕಾಲದಲ್ಲಿ ಬಹಳ ಏರುಪೇರಾಯಿತು. ಉತ್ತರ ಭೂಭಾಗಗಳು ಮತ್ತು ಎತ್ತರ ಪ್ರದೇಶಗಳು ವಾಯುಗುಣದ ಎಚ್ಚರಿಕೆಯಿಂದ ಹಿಮಾಚ್ಛಾದಿತವಾಗುತ್ತಿದ್ದವು. ಇತರ ಪ್ರದೇಶಗಳಲ್ಲಿ ಶೀತಾಧಿಕ ಒಣಹವೆ ಇರುತ್ತಿತ್ತು. ದೀರ್ಘ ಕಾಲಾನಂತರ ಉಷ್ಣತೆ ಅಧಿಕವಾಗಿ, ಹಿಮ ಕರಗಿ ಭೂಮಿಯ ಮೇಲೆ ಜಲ ಮತ್ತು ತೇವ ಹೆಚ್ಚಾಗುತ್ತಿತ್ತು. ವಾಯುಗುಣದ ಈ ವೈಪರೀತ್ಯಗಳ ಕಾಲವನ್ನು ಹಿಮಯುಗ ಮತ್ತು ಅಂತರ್ಹಿಮಯುಗಗಳೆಂದು ಕರೆಯಲಾಗಿದೆ. ಯೂರೋಪಿನಲ್ಲಿ ಪ್ಲೀಸ್ಟೊಸೀನ್ ಯುಗದಲ್ಲಿ ಇಂಥ ನಾಲ್ಕು ಹಿಮಯುಗಗಳನ್ನು ಇತರ ಉಷ್ಣವಲಯ ಪ್ರದೇಶಗಳಲ್ಲಿ ಅವುಗಳ ಸಮಕಾಲೀನವಾದ ವರ್ಷಯುಗಗಳನ್ನೂ (ಫ್ಲೂವಿಯಲ್) ಗುರುತಿಸಲಾಗಿದೆ. ಪ್ಲೀಸ್ಟೊಸೀನ್ ಯುಗದುದ್ದಕ್ಕೂ ವಿಶ್ವದ ವಿವಿಧ ಎಡೆಗಳಲ್ಲಿ ಮಾನವ ಕಾಣಿಸಿಕೊಂಡು ಹಲವು ರೀತಿಯ ಕಂದಮೂಲ ಫಲಗಳ ಸಂಗ್ರಹಣೆಯಿಂದಲೂ ಪ್ರಾಣಿಗಳ ಬೇಟೆಯಿಂದಲೂ ಜೀವನ ನಡೆಸುತ್ತಿದ್ದುದರಿಂದ ಈ ಯುಗವನ್ನು ಆದಿಮಾನವಯುಗ ಅಥವಾ ಪುರಾತನ ಶಿಲಾಯುಗವೆಂದು ಕರೆಯುವುದು ಸಹಜವಾಗಿದೆ. 

ಪ್ಲೀಸ್ಟೊಸೀನ್ ಯುಗದಲ್ಲಿ ಮಾನವ ಸಂಸ್ಕøತಿ ಮೊದಲ ಬಾರಿಗೆ ಕಾಣಿಸಿಕೊಂಡಿತಾದರೂ ಆಗ ಮಾನವನ ಉಗಮವಾಯಿತೆಂದು ಅರ್ಥವಲ್ಲ. ವಿಶ್ವದ ಜೀವಕೋಟಿಯ ಉಗಮ ಮತ್ತು ವಿಕಾಸದ ಇತಿಹಾಸದಲ್ಲಿ ಮಾನವನದು ಕೊನೆಯ ಹಂತವೆಂಬುದನ್ನು ಜೀವವಿಜ್ಞಾನಿಗಳು ಒಪ್ಪಿದ್ದಾರೆ. ಸೆನೋಜೋಯಕ್ ಪರ್ವದ ಮೊದಲ ಭಾಗವಾದ ಟರ್ಷಿಯರಿ ಕಾಲದಲ್ಲಿ ಮೊತ್ತಮೊದಲಿಗೆ ಪ್ರಧಾನ ಸ್ತನಿ ಪ್ರಾಣಿ ವರ್ಗವಾದ ಪ್ರೈಮೇಟಿನ ಅಂದರೆ ಮಂಗ ಮತ್ತು ಮಾನವ ವರ್ಗಗಳನ್ನೊಳಗೊಂಡ, ಶಾಖೆ ಕಾಣಿಸಿಕೊಂಡಿತು. ಪ್ಲೀಸ್ಟೊಸೀನ್ ಯುಗದಲ್ಲಿ ಮಂಗಗಳ ಸಂತತಿ ಕವಲೊಡೆದು ಪೂರ್ಣ ಮಾನವ ಹಂತ ಆರಂಭವಾಯಿತೆಂದು ಕಾಣುತ್ತದೆ. ಮರಗಳ ಮೇಲೆ ವಾಸಿಸುತ್ತಿದ್ದ ಮಂಗಗಳು ಸಂದರ್ಭಗಳ ಒತ್ತಡದಿಂದ ಭೂಮಿಗೆ ಇಳಿದು ಬರುವಂತಾಯಿತು. ಚತುಷ್ಟಾದಿಗಳಾಗಿದ್ದ ಆ ಪ್ರಾಣಿಗಳು ಕ್ರಮೇಣ ದ್ವಿಪಾದಿಗಳಾದುವು. ದೇಹದ ಮುಂಗಾಲುಗಳು ಕೈಗಳಾಗಿ ಪರಿವರ್ತಿತವಾದವು. ಕಾಲಕ್ರಮದಲ್ಲಿ ಬುದ್ಧಿಯ ವಿಕಸನವೂ ಆಗಿ ನೆಟ್ಟಗೆ ನಿಂತು ನಡೆದಾಡುವ ಬುದ್ಧಿಜೀವಿ ಮಾನವನ (ಹೋಮೊಸೇಪಿಯನ್) ಅವತಾರವಾಯಿತು. ಆದರೆ ದೈಹಿಕ-ಮಾನಸಿಕ ಬದಲಾವಣೆಗಳು ಬಹಳ ನಿಧಾನವಾಗಿ ಉಂಟಾದುವು. ಅಂಥ ಬದಲಾವಣೆಗಳ ವಿವಿಧ ಹಂತಗಳ ಸಾಕ್ಷ್ಯಗಳು ಪಳೆಯುಳಿಕೆಗಳ ರೂಪದಲ್ಲಿ ನಮಗೆ ದೊರಕುವುದಿಲ್ಲ. ಆದ್ದರಿಂದ ಜೀವನ ನಿರ್ವಹಣೆಗಾಗಿ ಮಾನವ ಆಯುಧ ತಯಾರಿಕೆಯಲ್ಲಿ ತೊಡಗಿದಂದು ಮಾನವನ ಹುಟ್ಟು ಆಯಿತೆಂದು ಹೇಳುತ್ತಾರೆ. ಅಂದರೆ ಮೊದಲ ಮಾನವ ಆಯುಧ ತಯಾರಿಸಿದ ಜೀವಿ. ಆಫ್ರಿಕ, ಯೂರೋಪ್ ಮತ್ತು ಏಷ್ಯದ ಹಲವೆಡೆಗಳಲ್ಲಿ ಇಂಥ ಆದಿಮಾನವನ ಪಳೆಯುಳಿಕೆಗಳು ಸಿಗುತ್ತವೆ. 

ಪೂರ್ವ ಆಫ್ರಿಕದ ಓಲ್ಡುವೆಗಾರ್ಜ್ ಮತ್ತು ಲೇಕ್ ಇಯಾಸಿ ಪ್ರದೇಶಗಳಲ್ಲಿ ಸಿಕ್ಕಿದ ಪಳೆಯುಳಿಕೆಗಳ ಆಧಾರದಿಂದ ಮಾನವಪೂರ್ವ ಜೀವಿಗಳ ಬಗ್ಗೆ ಕೆಲವು ಸಂಗತಿಗಳು ತಿಳಿಯುತ್ತವೆ. ಅವು ಮೊದಲ ಬಾರಿಗೆ ನೆಟ್ಟಗೆ ನಿಲ್ಲಲಾರಂಭಿಸಿದುವು. ಆ ಹಂತದ ಜೀವಿಗಳನ್ನು ನಷ್ಟಜೀವಿ ಶಾಸ್ತ್ರಜ್ಞರು ಆಸ್ಟ್ರಲೊಪಿಥಿಸೀನ್ ಎಂದು ಕರೆದಿದ್ದಾರೆ. ಆ ಹಂತದ ಅವಶೇಷಗಳು ದಕ್ಷಿಣ ಆಫ್ರಿಕ, ಜಾರ್ಡನ್, ಪ್ಯಾಲಸ್ಟೀನ್‍ನಲ್ಲೂ ಪೂರ್ವವಲಯದ ಜಾವಾ ಪ್ರದೇಶಗಳಲ್ಲೂ ದೊರಕಿವೆ. ಮುಂದಿನ ಮಜಿಲಿನ ಪ್ರಾಣಿಯ, ಆದಿಮಾನವನ, ಪಳೆಯುಳಿಕೆಗಳನ್ನು ಓಲ್ಡುವೆಗಾರ್ಜ್‍ನಲ್ಲಿ ಸಂಗ್ರಹಿಸಿಲಾಗಿದೆ. ಅವನನ್ನು ಜಂಜಾಂಥ್ರೋಪಸ್ ಎಂದು ಹೆಸರಿಸಲಾಗಿದೆ. ಈ ಅವಶೇಷಗಳು ಪಾಂಗಿಡೆ ವಂಶದ ಮಂಗಗಳಿಂದ ಮಾನವ ಸಂತತಿಯತ್ತ ಆದ ಪ್ರಗತಿಯನ್ನು ಸೂಚಿಸುತ್ತವೆ. ಮುಂದಿನ ಹಂತಕ್ಕೆ ಸೇರಿದ ಮಾನವ (ಹೋಮೋಎರೆಕ್ಟಸ್) ಸಂತತಿಯ ಪಳೆಯುಳಿಕೆಗಳು ಜಾವಾದಲ್ಲೂ ಚೀನದ ಪೀಕಿಂಗ್ ಬಳಿಯ ಚೌಕೊಟಿಯೆನ್ ಗುಹೆಗಳಲ್ಲೂ ವಾಯವ್ಯ ಆಫ್ರಿಕದಲ್ಲೂ ಅಲ್ಜೀರಿಯ, ಮೊರಾಕೊ, ಹಂಗರಿ ಮತ್ತು ನೈಋತ್ಯ ಜರ್ಮನಿಗಳಲ್ಲೂ ಕಂಡುಬಂದಿವೆ. ಈ ಹಂತದಲ್ಲೂ ಕ್ರಮೇಣ ಮಂಗ ಲಕ್ಷಣಗಳು ಮಾಯವಾಗಿ ಹೆಚ್ಚು ಸ್ಫುಟವಾದ ಮಾನವ ಲಕ್ಷಣಗಳು ಬೆಳೆದುವು. ಇತ್ತೀಚಿನವರೆಗೂ ಈ ಪ್ರಾಣಿಗಳನ್ನು ಮಂಗಮಾನವರೆಂದು ಕರೆಯುತ್ತಿದ್ದರೂ ಈಗ ಇವನ್ನು ನೈಜ ಮಾನವರೆಂದು ಕರೆಯಬಹುದಾಗಿದೆ. ಈ ಹಂತದ ಮಾನವರು ಚಕ್ಕೆ ಕಲ್ಲಿನ ಹಲವು ಬಗೆಯ ಆಯುಧಗಳನ್ನು, ಕೈಗೊಡಲಿಯೇ ಮುಂತಾದ ಪುರಾತನ ಶಿಲಾಯುಗದ ಮೊದಲ ಹಂತದ, ಆಯುಧಗಳನ್ನೂ ತಯಾರಿಸಿ ಬಳಸುತ್ತಿದ್ದರು. ಪ್ರಪಂಚದ ಕೆಲವು ಸ್ಥಳಗಳಲ್ಲಿ ಪ್ಲೀಸ್ಟೊಸೀನ್ ಯುಗದ ಆಧಿಭಾಗಕ್ಕೆ ಸೇರಿದಂತೆ ಈ ಜನರ ಅವಶೇಷಗಳು ದೊರತಿದ್ದರೂ ಪ್ರಾಚೀನ ಪ್ರಪಂಚದ ಬಹುಭಾಗಗಳಲ್ಲಿ ಮಧ್ಯ ಪ್ಲೀಸ್ಟೊಸೀನ್ ಯುಗದಲ್ಲಿ ಈ ಸಂಸ್ಕøತಿ ಪ್ರಬಲವಾಗಿತ್ತು. ಈ ಯುಗದ ಅಂತ್ಯದ ವೇಳೆಗೆ ಮಾನವ ಪೀಳಿಗೆಯಲ್ಲಿ ಎರಡು ಹೊಸ ಶಾಖೆಗಳು ಕಾಣಿಸಿಕೊಂಡುವು. ಈ ಶಾಖೆಗಳ ಜೀವಿಗಳನ್ನು ಹೋಮೊ ಸೇಪಿಯನ್ ಅಥವಾ ಬುದ್ಧಿಶಾಲಿ ಮಾನವನೆಂದು ಕರೆದಿದ್ದಾರೆ. ಅವುಗಳಲ್ಲಿ ಒಂದು ನಿಯಾಂಡರ್‍ತಾಲ್ ಮಾನವ ಶಾಖೆ. ಈ ಶಾಖೆಯ ಮಾನವನರು ನೈಋತ್ಯ ಯೂರೋಪ್ ಮತ್ತು ಪಶ್ಚಿಮ ಏಷ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಅವರ ಅವಶೇಷಗಳನ್ನು ಮೊದಲಿಗೆ ಫ್ರಾನ್ಸಿನ ನಿಯಾಂಡರ್‍ತಾಲ್ ಎಂಬಲ್ಲಿ ಗುರುತಿಸಿದ್ದರಿಂದ ಇವರನ್ನು ನಿಯಾಂಡರ್‍ತಾಲ್ ಮಾನವರೆವರೆಂದು ಕರೆಯಲಾಗಿದೆ. ಮಾನವ ಕಾಲದಲ್ಲಿ ಅದು ಅವಸರಣ ಹಾದಿಯಲ್ಲಿ ನಡೆದ ಒಂದು ಶಾಖೆ. ಸ್ವಲ್ಪ ಕಾಲದ ಅನಂತರ ಆ ಶಾಖೆ ನಷ್ಟಗೊಂಡಿತು. ಮತ್ತೊಂದು ಶಾಖೆಯೇ ಈಗಿನ ಮಾನವನ ಮೂಲ ಪುರುಷನಾದ ಆಧುನಿಕ ಮಾನವನದು ಕ್ರೋಮ್ಯಾಗ್ನನ್ ಎಂಬಲ್ಲಿ ಆ ಸಂತತಿಯ ಅವಶೇಷ ಮೊದಲು ಸಿಕ್ಕಿದ್ದರಿಂದ ಅದನ್ನು ಕ್ರೋಮ್ಯಾಗ್ನನ್ ಮಾನವನೆಂದೂ, ಹೋಮೊ ಸೇಪಿಯನ್-ಸೇಪಿಯನ್ ಎಂದೂ ಕರೆಯಲಾಗಿದೆ. ಮಧ್ಯ ಪ್ಲೀಸ್ಟೊಸೀನ್ ಯುಗದ ಅಂತ್ಯಭಾಗದಲ್ಲಿ ಕಾಣಿಸಿಕೊಂಡ ಆ ಸಂತತಿ ಪ್ರಪಂಚದಲ್ಲೆಲ್ಲ ಹರಡಿ ಈಗಿನ ಎಲ್ಲ ಮಾನವ ಬುಡಕಟ್ಟುಗಳಿಗೂ ಆದಿಯಾಗಿದೆ. ಮೊದಲಿಗೆ ಬೇಟೆ ಮತ್ತು ಆಹಾರ ಸಂಗ್ರಹಣೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ಈ ಜನ ಕ್ರಮೇಣ ಪ್ರಗತಿಪರ ಆಯುಧಗಳನ್ನು ತಯಾರಿಸಿದರು. ಪ್ಲೀಸ್ಟೊಸೀನ್ ಯುಗದ ಕೊನೆಗಾಲದಲ್ಲಿ ಇವರು ಹೊಸ ಆಯುಧೋಪಕರಣಗಳನ್ನು ತಯಾರಿಸಿದರಲ್ಲದೆ ಶಿಲ್ಪ, ರೇಖಾಚಿತ್ರ ಮತ್ತು ಚಿತ್ರಕಲೆಯನ್ನು ಅಮೋಘವಾಗಿ ಬೆಳೆಸಿದರು. ಪರಿಸರದ ಒತ್ತಡಕ್ಕೆ ಸಿಲುಕಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಬಾಳಬೇಕಾದಾಗ ತಮ್ಮ ಹೊಸ ಉಪಜ್ಞೆ ಆವಿಷ್ಕಾರಗಳ ಸಹಾಯದಿಂದ ಹೆಚ್ಚು ಸುಗಮವಾದ ಜೀವನ ಪದ್ಧತಿಯನ್ನು ರೂಪಿಸಿಕೊಂಡರು. ಪುರಾತನ ಶಿಲಾಯುಗ ಕೊನೆಗೊಂಡ ಅನಂತರವೂ ಈ ರೀತಿಯ ಮಾನವ ಜೀವನದ ಪ್ರಗತಿ ಹೆಚ್ಚು ತ್ವರಿತವಾಗಿ ನಡೆಯಲು ಇವರು ತಳಹದಿಯನ್ನು ನಿರ್ಮಿಸಿದರೆಂದರೆ ತಪ್ಪಲ್ಲ.

ಪುರಾತನ ಶಿಲಾಯುಗ ಸಂಸ್ಕøತಿಯ ಪ್ರಾರಂಭ ಯಾವಾಗ ಎಂಬುದು ಬಹಳ ವಿವಾದಾಸ್ಪದ. ದೈಹಿಕ ವಿಕಾಸದ ಮಜಲುಗಳನ್ನು ನಿರ್ಧಾರಾತ್ಮಕವಾಗಿ ಗುರುತಿಸಲಾಗುವುದಿಲ್ಲವೆಂಬ ಕಾರಣದಿಂದ ಸಂಸ್ಕøತಿಯ ಉಗಮವನ್ನು ಪುರಾತತ್ವಜ್ಞರು ಆಧಾರವಾಗಿಟ್ಟುಕೊಂಡಿದ್ದಾರಷ್ಟೆ. ಆದರೂ ಮಂಗಗಳ ಹಂತದಿಂದ ನೈಜ ಮಾನವನತ್ತ ವಿಕಾಸ ಒಮ್ಮೆಗೇ ಸಂಭವಿಸಲಿಲ್ಲ. ಹತ್ತಾರು ಸಹಸ್ರ ವರ್ಷಗಳ ಕಾಲ ನಿಧಾನವಾಗಿ ದೈಹಿಕ-ಸಾಂಸ್ಕøತಿಕ ಬದಲಾವಣೆಗಳು ನಡೆದಿರಬೇಕೆಂದು ಮಾನವ ಶಾಸ್ತ್ರಜ್ಞರು ನಿರ್ಧರಿಸಿದ್ದಾರೆ. ಈ ಪ್ರಗತಿಯನ್ನು ತಿಳಿಯಲು ನಮಗೆ ಹಲವು ಮಾರ್ಗಗಳಿವೆ. ಮೊದಲನೆಯದಾಗಿ ಆ ಮಾನವ ಪೂರ್ವಹಂತದ ಪ್ರಾಣಿಗಳ ಚಟುವಟಿಕೆಗಳು ಅವರು ಉಪಯೋಗಿಸಿದ ಆಯುಧೋಪಕರಣಗಳ ಬಗ್ಗೆ ಅಲ್ಪ ಸ್ವಲ್ಪ ಪುರಾವೆಗಳು ದೊರಕಿವೆ. ಎರಡನೆಯದಾಗಿ ಆ ಹಂತದ ಮಾನವರೀತಿಯ ಪ್ರಾಣಿಗಳ ದೇಹಾವಶೇಷಗಳು ಸಿಕ್ಕಿರುವುದರಿಂದ ಅವುಗಳ ಅಧ್ಯಯನದಿಂದ ಅವರ ಸಾಮಥ್ರ್ಯ ಮತ್ತು ನಡೆವಳಿಕೆಯನ್ನೂ ಊಹಿಸಬಹುದಾಗಿದೆ. ಉದಾ : ಅವರ ದಂತರಚನೆ ಮತ್ತು ದಂತಸವೆತದ ಪರೀಕ್ಷೆಯಿಂದ ಅವರ ಆಹಾರ ಎಂಥದೆಂಬುದನ್ನೂ ಅವರ ಪರಿಸರ ಹೇಗಿತ್ತೆಂಬುದನ್ನೂ ತಿಳಿಯಬಹುದಾಗಿದೆ. ಮೂರನೆಯದಾಗಿ ಅವರು ವಾಸಿಸುತ್ತಿದ್ದ ಭೌಗೋಳಿಕ ಸನ್ನಿವೇಶವನ್ನು ಪುನರ್ನಿರ್ಮಿಸಿಕೊಳ್ಳಬಹುದಾಗಿದೆ. ನಾಲ್ಕನೆಯದಾಗಿ ಮಾನವ ಸಂತತಿಯೊಂದಿಗೆ ನಿಕಟ ಬಾಂಧವ್ಯ ಪಡೆದಿರುವ ಮಂಗಗಳ ಜೀವನ ರೀತಿಯಿಂದ ಕೆಲವು ಸಂಗತಿಗಳನ್ನು ಊಹಿಸಿ ತಿಳಿದುಕೊಳ್ಳಬಹುದಾಗಿದೆ. ಕೊನೆಯದಾಗಿ, ಆ ಸಂಸ್ಕøತಿಯ ಕಾಲದಲ್ಲಿ ಆಸ್ತಿತ್ವದಲ್ಲಿದ್ದ, ನಮಗೆ ತಿಳಿದಿರುವ ಪರಿಸ್ಥಿತಿಗೆ ಕಾರಣಗಳನ್ನು ಊಹಿಸುವುದರ ಮೂಲಕ ಆಗಿನ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲ ವಿಧಾನಗಳಿಂದ ಆ ಸಂಸ್ಕøತಿಯ ಪ್ರಾರಂಭವನ್ನು ಪುನರ್ನಿರ್ಮಿಸಬಹುದಾಗಿದೆ.

ಮಾನವ ಪೀಳಿಗೆಯಲ್ಲಿ ಮಾತ್ರ ಸಂಸ್ಕøತಿ ತಲೆದೋರಲು ಮುಖ್ಯ ಕಾರಣವೆಂದರೆ ಇತರ ಪ್ರಾಣಿಸಂತತಿಗಳಲ್ಲಿ ಇಲ್ಲದ ಕೆಲವು ಗುಣಗಳು ಮಾನವನಲ್ಲಿದ್ದುದು ಪ್ರಧಾನವಾದ ಎಲ್ಲ ಸ್ತನಿ ಪಾಣಿಗಳಿಗೂ ಸಾಮಾನ್ಯವಾದ ಚುರುಕಾದ ದೃಷ್ಟಿ. ದೊಡ್ಡ ಮಿದುಳು ಮತ್ತು ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳುವ ಶಕ್ತಿ-ಇವುಗಳ ಜೊತೆಗೆ ಮಾನವ ಹಂತದತ್ತ ಸಾಗುತ್ತಿದ್ದ ಜೀವಿಗಳಲ್ಲಿ ನೆಟ್ಟಗೆ ನಿಲ್ಲುವ ಮತ್ತು ಆ ಕಾರಣದಿಂದ ವಿಮುಕ್ತವಾದ ಕೈಗಳನ್ನು ಆಯುಧಗಳ ತಯಾರಿಕೆ, ಬಳಕೆ, ಚಲನಶಕ್ತಿ ಮುಂತಾದ ಚಟುವಟಿಕೆಗಳಿಗೆ ಬಳಸಲು ಸಾಧ್ಯವಾಯಿತು. ಕ್ರಮೇಣ ಈ ಚಟುವಟಿಕೆಗಳ ಮುಖಾಂತರ ಅವಕ್ಕೆ ಅವಶ್ಯಕವಾದ ದೈಹಿಕ ಮಾರ್ಪಾಡುಗಳು ಸಂಭವಿಸಿದುವು. ಸಸ್ಯಜನ್ಯ ಆಹಾರಗಳನ್ನು ಸೇವಿಸುತ್ತ ಮರಗಳ ಮೇಲೆ ಜೀವಿಸುತ್ತಿದ್ದ ಕೆಲವು ಪ್ರಾಣಿಗಳು ಭೂಮಿಗಿಳಿದು ಬಂದು ದ್ವಿಪಾದಿಗಳಾದ ಅನಂತರ ಈ ಬದಲಾವಣೆಗಳಾಗತೊಡಗಿದುವು; ಆ ಹಂತದಲ್ಲಿ ಸಣ್ಣ ಪ್ರಾಣಿಗಳ ಬೇಟೆಯಿಂದ ಆಹಾರ ಸಂಪಾದನೆ ಮಾಡತೊಡಗಿದ ಮಾನವ ಪ್ರಾಣಿಗಳು ಮಾಂಸಾಹಾರಿಗಳಾದರು. ಸಸ್ಯಜನ್ಯ ಆಹಾರದಿಂದ ಮಾಂಸಹಾರಕ್ಕೆ ಮಾನವ ಮಾರ್ಪಟ್ಟಾಗಲೇ ಸಂಸ್ಕøತಿಯ ಏರುಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟನೆನ್ನಲಾಗಿದೆ. ಏಕೆಂದರೆ ಸಸ್ಯಜನ್ಯವಾದ ಕಂದಮೂಲ ಫಲಗಳನ್ನು ಒಂಟಿಯಾಗಿ ಸಂಗ್ರಹಿಸಲು ಸಾಧ್ಯ; ಆದರೆ ಬೇಟೆಗೆ ಸಾಮೂಹಿಕ ಯತ್ನ ಅವಶ್ಯ. ಮತ್ತೊಂದು ಸಂಗತಿಯೆಂದರೆ ಇತರ ಸ್ತನಿ ಪ್ರಾಣಿಗಳಲ್ಲಿ ಲೈಂಗಿಕ ಪ್ರವೃತ್ತಿ ಕೆಲವು ಋತುಗಳಿಗೆ ಸೀಮಿತವಾಗಿದ್ದರೆ ಮಾನವ ಸ್ತ್ರೀಯರಲ್ಲಿ ಸಾರ್ವಕಾಲಿಕ, ಮತ್ತೆ ಇತರ ಸ್ತನಿ ಪ್ರಾಣಿಗಳಲ್ಲಿ ಶಿಶು ಜನನವಾಗುವ ಮೊದಲೇ ಹೆಚ್ಚು ಬೆಳೆದಿದ್ದು, ಅನಂತರ ಬೇಗ ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಪಡೆದಿರುತ್ತದೆ; ಅದರೆ ಮಾನವ ಶಿಶು ಬೇಗ ಜನಿಸಿ ದೀರ್ಘಕಾಲ ಪರಾವಲಂಬಿಯಾಗಿರುತ್ತದೆ. ಈ ಪರಾವಲಂಬಿ ಜೀವನದ ಕಾಲದಲ್ಲಿ ಅದು ತನ್ನ ಬುದ್ಧಿಕೋಶವನ್ನು ಬೆಳೆಸಿಕೊಳ್ಳುತ್ತದೆಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಈ ಕಾರಣಗಳಿಂದ ಮಾನವ ಸ್ತ್ರೀ ತನ್ನ ಜೀವನನಿರ್ವಹಣೆಗೆ ಗರ್ಭಕಾಲ ಮತ್ತು ಶಿಶುಪೋಷಣೆಯ ಕಾಲದಲ್ಲಿ ಪರಾವಲಂಬಿಯಾಗಿರುತ್ತಾಳೆ. ಹಾಗಾಗಿ ಪುರುಷ ತನ್ನ ಜೀವನನಿರ್ವಹಣೆಯೊಂದಿಗೆ ಸ್ತ್ರೀ ಮತ್ತು ಶಿಶುಗಳನ್ನು ರಕ್ಷಿಸಬೇಕಾಗಿ ಬಂತು. ಹೀಗಾಗಿ ಮಾನವರಲ್ಲಿ ಸಾಮಾಜಿಕ ಜೀವನ ಅನಿವಾರ್ಯವಾಗಿ ಮತ್ತು ಇದರ ಫಲವಾಗಿ ಸಂಸ್ಕøತಿ ಬೆಳೆಯುವಂತಾಯಿತು.

ಇದಲ್ಲದೆ ಮಾನವ ಪೀಳಿಗೆಯ ಇನ್ನು ಕೆಲವು ವಿಶಿಷ್ಟ ಗುಣಗಳೆಂದರೆ ಮುಂದಾಲೋಚನೆ, ಮುಂದಿನ ಬೇಕು-ಬೇಡಗಳ ಯೋಜನೆ, ಮತ್ತು ಪೂರ್ವಭಾವಿಯಾಗಿ ಸಿದ್ಧವಾಗುವುದು; ಈ ಗುಣಗಳಿಂದ ತನ್ನ ಭವಿಷ್ಯಜೀವನ ತನಗೆ ಬೇಕಾಗುವಂತೆ ರೂಪಿಸಿಕೊಳ್ಳುವ ಸಾಮಥ್ರ್ಯ ಬೆಳೆಸಿಕೊಳ್ಳಲು ಮಾನವನಿಗೆ ಸಾಧ್ಯವಾಯಿತು. ತನ್ನ ಅನುಭವಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಶಕ್ತಿಯಿತ್ತು. ಅದಕ್ಕಾಗಿ ಸಂಪರ್ಕ ಮಾಧ್ಯಮವಾಗಿ ಅವನು ಭಾಷೆಯನ್ನು ಬೆಳೆಸಿಕೊಂಡ. ಮಾನವನ ಮಿದುಳಿನ ಹೆಚ್ಚು ಭಾಗ ಆ ಅನುಭವ ಸಂಗ್ರಹಣೆ ಮತ್ತು ಸಂಪರ್ಕ ಕ್ರಿಯೆಗಳಿಗೆ ಮೀಸಲಾಗಿದೆಯೆಂದು ಜೀವಶಾಸ್ತ್ರಜ್ಞರು ತಿಳಿಸುತ್ತಾರೆ.

ಈ ವಿಶಿಷ್ಟ ಗುಣಗಳಿಂದ ಮಾನವ ಇತರ ಪ್ರಧಾನ ಸ್ತನಿ ಪ್ರಾಣಿಗಳಿಗಿಂತ ಪ್ರಗತಿಪರನಾಗಿದ್ದ. ತನ್ನ ಆಹಾರ ಸಂಪಾದನೆ ಮತ್ತು ದೇಹರಕ್ಷಣೆಗಾಗಿ ಆಯುಧೋಪಕರಣಗಳನ್ನು ಉಪಯೋಗಿಸಬೇಕಾಗಿದ್ದುದರಿಂದ ಸಂಸ್ಕøತಿಯನ್ನು ಬೆಳೆಸಿಕೊಳ್ಳುವ ಅವಶ್ಯಕತೆಯುಂಟಾಯಿತು. ಹೀಗಾಗಿ ಮೊದಮೊದಲು ನಿಸರ್ಗದಲ್ಲಿ ದೊರಕುತ್ತಿದ್ದ ಕಲ್ಲು, ಮೂಳೆ ಮತ್ತು ಮರದ ದೊಣ್ಣೆಗಳನ್ನು ಉಪಯೋಗಿಸತೊಡಗಿದ. ಮಂಗಗಳು ಸಹ ಈ ರೀತಿ ಕೆಲವು ಬಾರಿ ನೈಸರ್ಗಿಕ ಸಲಕರಣೆಗಳನ್ನು ಉಪಯೋಗಿಸಬಲ್ಲುವು. ಆದರೆ, ಮಾನವ ಮಾತ್ರ ಮುಂದಾಲೋಚನೆಯಿಂದ ತನಗೆ ಬೇಕಾಗುವ ಆಯುಧೋಪಕರಣಗಳ ನಿರ್ಮಾಣ ಕಾರ್ಯವನ್ನು ತನ್ನ ಬುದ್ಧಿಶಕ್ತಿಯ ಸಹಾಯದಿಂದ ಕೈಕೊಳ್ಳಬಹುದಾಗಿತ್ತು. ಪುರಾತನ ಶಿಲಾಯುಗದ ಬಹುಭಾಗದಲ್ಲಿ ಮಾನವ ನಿರ್ಮಿತ ಆಯುಧೋಪಕರಣಗಳು ಒರಟಾಗಿದ್ದುವು. ಆಗಿನ ಸಂಸ್ಕøತಿಯನ್ನು ಸಂಸ್ಕøತಿಯ ಮೂಲರೂಪ ಅಥವಾ ಪ್ರಾರಂಭದ ಹಂತವೆಂದು ಕರೆಯಲಾಗಿದೆ. ಆ ಹಂತದಲ್ಲಿ ಮಾನವ ಉದ್ದಿಶ್ಯಪೂರ್ವಕವಾಗಿ ಆಯ್ದು ಕಲ್ಲು ಅಥವಾ ಮೂಳೆ ಅಥವಾ ಮರದಿಂದ ತನ್ನ ಅವಶ್ಯಕತೆಗಳಿಗೆ ಬೇಕಾಗುವಂಥ ಹರೆಯುವ, ಕತ್ತರಿಸುವ ಮತ್ತು ಮೊನಚಾದ ಚಕ್ಕೆಕಲ್ಲಿನಾಯುಧಗಳನ್ನೂ, 

ಉಂಡೆಕಲ್ಲಿನಾಯುಧಗಳನ್ನೂ ನಿರ್ಮಿಸಿಕೊಂಡು ಆಯುಧ ತಯಾರಿಕಾ ವಿಧಾನವನ್ನು ಮುಂದಿನ ಪೀಳಿಗೆಗಳವರೆಗೆ ಭಾಷೆಯ ಮುಖಾಂತರ ತಿಳಿಸುತ್ತಿದ್ದ. ಪ್ರತಿ ಪೀಳಿಗೆಯವರು ತಮ್ಮ ಬುದ್ಧಿಶಕ್ತಿಗೆ ಅನುಗುಣವಾಗಿ ಹೊಸ ಪ್ರಯೋಗಗಳನ್ನು ಮಾಡಿ ಆಯುಧ ರೀತಿಗಳಲ್ಲಿ ಸುಧಾರಣೆ ಮಾಡುತ್ತಿದ್ದರು. ಹೀಗಾಗಿ ಕೈಗೊಡಲಿ, ಕ್ಲೀವರ್ ಕೊಡಲಿ, ಈಟಿಮೊನೆ, ಕೊರೆಯುವ ಆಯುಧ ಇಂಥ ಹೊಸ ಆಯುಧಗಳ ಆವಿಷ್ಕಾರವಾಗತೊಡಗಿತು. ಬದಲಾಗುತ್ತಿದ್ದ ಹವಾಗುಣ ಮತ್ತು ವಿವಿಧ ಪ್ರದೇಶಗಳ ವೈಪರೀತ್ಯಗಳಿಗೆ ತಕ್ಕಂತೆ ಆಗಿನ ಮಾನವರು ತಮ್ಮ ಜೀವನರೀತಿಯನ್ನು ಹೊಂದಿಸಿಕೊಂಡು ಅಂಥ ಜೀವನಕ್ರಮಕ್ಕೆ ಬೇಕಾಗುವ ಪ್ರತ್ಯೇಕ ಆ ಯುದ್ಧ ರೀತಿಗಳನ್ನು ನಿರ್ಮಿಸುತ್ತಿದ್ದುದರಿಂದ ಪ್ರಾದೇಶಿಕ ಸಂಸ್ಕøತಿಗಳಲ್ಲಿ ವೈವಿಧ್ಯ ತಲೆದೋರಿತು. ಬ್ರಿಟನ್, ಫ್ರಾನ್ಸ್, ಉತ್ತರ ಯೂರೋಪಿನ ಹಲವು ಪ್ರದೇಶಗಳಲ್ಲಿ ಬೇಟೆಗಾರಿಕೆ, ಮೀನುಗಾರಿಕೆಗಳಿಗೆ ಹೆಚ್ಚು ಅವಶ್ಯವಾದ ಚಕ್ಕೆ ಕಲ್ಲಿನಾಯುಧಗಳು ಅಧಿಕವಾಗಿದ್ದುವು. ಸಮಶೀತೋಷ್ಣ ಮತ್ತು ಉಷ್ಣವಲಯದ ಪ್ರದೇಶಗಳಾದ ನೈಋತ್ಯ ಯೂರೋಪು, ದಕ್ಷಿಣ ಯೂರೋಪು, ಆಫ್ರಿಕ, ಪಶ್ಚಿಮ ಏಷ್ಯ, ಭಾರತ, ಚೀನ ಮತ್ತು ಆಗ್ನೇಯ ಏಷ್ಯ ಪ್ರದೇಶಗಳಲ್ಲಿ ಉಂಡೆ ಕಲ್ಲಿನ ಮತ್ತು ತಿರುಳ್ಗಲ್ಲಿನ ಆಯುಧಗಳನ್ನು ಅರಣ್ಯ ವೃಕ್ಷಜನ್ಯ ಆಹಾರ ಸಂಗ್ರಹಣೆಗಾಗಿ ಅಧಿಕ ಪರಿಮಾಣಗಳಲ್ಲಿ ಬಳಸುತ್ತಿದ್ದರು. ಆ ಕಾಲದಲ್ಲಿ ಹೋಮೊ ಎರೆಕ್ಟಸ್ ಪೀಳಿಗೆ ಪ್ರವರ್ಧಮಾನವಾಗಿತ್ತು. ಆ ಮೊದಲು ಅಸ್ತಿತ್ವದಲ್ಲಿದ್ದ ಅಸ್ಟ್ರಲೊಪಿಥಿಕಸ್ ಮತ್ತು ಜಿಂಜಾಂಥ್ರೋಪೆಸೆ ಪೀಳಿಗೆಗಳು ಕ್ರಮೇಣ ಕ್ಷೀಣಿಸುತ್ತಿದ್ದವು. ಹೋಮೊ ಎರೆಕ್ಟಸ್ ಪೀಳಿಗೆಗೆ ಸೇರಿದ ನಿಯಾಂಡರ್‍ತಾಲ್ ವರ್ಗ ಫ್ರಾನ್ಸ್, ನೈಋತ್ಯ ಹಾಗೂ ದಕ್ಷಿಣ ಮಧ್ಯ ಯೂರೋಪ್ ಮತ್ತು ಏಷ್ಯ ಪ್ರದೇಶಗಳಲ್ಲಿ ವರ್ಧಿಸುತ್ತಿತ್ತು. ಪುರಾತನ ಶಿಲಾಯುಗದ ಕೊನೆಗಾಲದಲ್ಲಿ ಆಧುನಿಕ ಮಾನವ ಪೀಳಿಗೆ ಕಾಣಿಸಿಕೊಂಡಿತು. ಹೆಚ್ಚು ಬುದ್ಧಿಶಾಲಿಯಾದ ಈ ಪೀಳಿಗೆ ಬದಲಾಗುತ್ತಿದ್ದ ಪರಿಸರಕ್ಕೆ ಕ್ರಮೇಣ ಹೊಂದಿಕೊಂಡು ಪ್ರಪಂಚದ ಎಲ್ಲಾ ಭಾಗಗಳಲ್ಲೂ ವ್ಯಾಪಿಸಿಕೊಂಡಿತು; ಇತರ ಪೀಳಿಗೆಗಳು ಕ್ರಮೇಣ ವಿನಷ್ಟಗೊಂಡುವು. ಈ ಕಾಲದಲ್ಲಿ ಪ್ರಾಣಿಪ್ರಪಂಚದಲ್ಲಿ ಸಹ ಪ್ರಾಚೀನ ಸಂತತಿಗಳು ವಿನಷ್ಟಗೊಂಡು ಎಲ್ಲೇ ಫ್ರಾಂಚಿಯನ್ ಮೊಸ್‍ಬಾಕಿಯಸ್ ಯುಗದ ಸುಧಾರಿತ ತಳಿಗಳು ತಲೆದೋರಿದವು. ಈ ಬೆಳವಣಿಗೆಗಳನ್ನು ವಿಮರ್ಶಿಸುವಾಗ ಗಮನದಲ್ಲಿಡಬೇಕಾದ ಒಂದು ಮುಖ್ಯ ಅಂಶವೆಂದರೆ, ಮೇಲೆ ಹೇಳಿದ ಮುನ್ನಡೆ ವಿವಿಧ ಪ್ರದೇಶಗಳಲ್ಲಿ ಒಂದೇ ಸಮನಾಗಿರಲಿಲ್ಲವೆಂಬುದು ಕೆಲವು ಕಡೆ ಅದು ಪ್ರಾದೇಶಿಕ ಪರಿಸ್ಥಿತಿಗನುಗುಣವಾಗಿ ತ್ವರಿತಗತಿಯಲ್ಲಿ ಮುನ್ನಡೆದಿದ್ದರೆ ಮತ್ತೆ ಕೆಲವು ಸ್ಥಳಗಳಲ್ಲಿ ಕುಂಠಿತಗತಿಯಲ್ಲಿ ಸಾಗುತ್ತಿತ್ತು. ಆಯಾ ಪ್ರದೇಶದ ಸಸ್ಯವರ್ಗ, ಪ್ರಾಣಿವರ್ಗ ಮತ್ತು ಮಾನವ ವರ್ಗಗಳ ಸ್ವಭಾವಕ್ಕನುಗುಣವಾಗಿ ಸಂಸ್ಕøತಿಗಳು ರೂಪುಗೊಳ್ಳುತ್ತಿದ್ದವು. ದೂರಪ್ರದೇಶಗಳಲ್ಲಿ ಕಾಣಬರುವ ಸಂಸ್ಕøತಿಗಳನ್ನು ಹೋಲಿಸುವುದು ತಪ್ಪಾಗುತ್ತದೆ. ಮತ್ತೆ ಅನೇಕ ಪ್ರದೇಶಗಳಲ್ಲಿ ದೊರಕುವ ಕಲ್ಲುಚಕ್ಕೆಗಳು ಉದ್ದಿಶ್ಯಪೂರ್ವಕವಾಗಿ ಮಾನವ ನಿರ್ಮಿಸಿದುವೋ? ಇಲ್ಲವೇ ನೈಸರ್ಗಿಕವಾಗಿ ಒಡೆದ ಕಲ್ಲುಚಕ್ಕೆಗಳೋ ಎಂಬುದನ್ನು ತೀರ್ಮಾನಿಸುವುದು ಬಹಳ ಕಷ್ಟ. ಆದ್ದರಿಂದ ಯಾವುದೋ ಒಂದು ಕಲ್ಲಿನಾಯುಧದ ಯಥಾರ್ಥತೆಯನ್ನು ಸ್ಥಾಪಿಸಲು ಪ್ರಯತ್ನಿಸುವುದಕ್ಕಿಂತ ಒಂದೆಡೆಯಲ್ಲಿ ಸಿಕ್ಕುವ ಸಮಗ್ರ ಅವಶೇಷಗಳನ್ನು ಪರಾಮರ್ಷಿಸುವುದು ಸಾಧುವಾಗುತ್ತದೆ. ವಿಶ್ವದ ಎಲ್ಲೆಡೆಗಳಲ್ಲೂ ಒಂದೇ ಕಾಲದಲ್ಲಿ ಆದಿಮಾನವ ಮತ್ತು ಅವನ ಆಯುಧಗಳು ಅಸ್ತಿತ್ವಕ್ಕೆ ಬರಲಿಲ್ಲ. ಈವರೆಗೆ ನಮಗೆ ತಿಳಿದಿರುವಂತೆ ಪೂರ್ವ ಮತ್ತು ದಕ್ಷಿಣ ಆಫ್ರಿಕದ ಕೆಲವು ನೆಲೆಗಳಲ್ಲಿ ಮಾನವ ಮೊದಲಿಗೆ ಅಸ್ತಿತ್ವಕ್ಕೆ ಬಂದಿದ್ದಿರಬಹುದು; ಆದರೆ, ಪ್ರಾಚೀನ ವಿಶ್ವದ ಇತರ ಎಡೆಗಳಲ್ಲಿ ಅದೇ ಸಮಯದಲ್ಲಿ ಸ್ವತಂತ್ರವಾಗಿ ಮಾನವ ಕಾಣಿಸಿಕೊಂಡಿರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಯಾವ ಕೇಂದ್ರಗಳಿಂದ ಮೊದಲ ಸಂಸ್ಕøತಿ ಹರಡಿತೆಂಬುದು ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಆಫ್ರಿಕದಿಂದ ಕ್ರಮೇಣ ಯೂರೋಪು ಮತ್ತು ಏಷ್ಯಗಳಿಗೆ ಈ ವಿಸ್ತರಣೆ ನಡೆದಿರಬಹುದೆಂದು ಊಹಿಸಲಾಗಿದೆ. 

ಪುರಾತನ ಶಿಲಾಯುಗದ ಕಾಲವಾದ ಪ್ಲೀಸ್ಟೊಸೀನ್ ಯುಗವನ್ನು ಅಧ್ಯಯನದ ಅನುಕೂಲಕ್ಕಾಗಿ ಆದಿ, ಮಧ್ಯ ಮತ್ತು ಅಂತ್ಯ ಪ್ಲೀಸ್ಟೊಸೀನ್ ಎಂಬುದಾಗಿ ವಿಂಗಡಿಸಲಾಗಿದೆ. ಆದಿ ಪ್ಲೀಸ್ಟೊಸೀನ್ ಕಾಲದಲ್ಲಿ ದಕ್ಷಿಣ ಆಫ್ರಿಕದ ಸ್ಟರ್ಕ್ ಫಾಂಟೀನ್, ಮತ್ತು ಸ್ಟಾರ್ಟ್‍ಕ್ರಾನ್ಸ್ ನೆಲೆಗಳಲ್ಲೂ ಪೂರ್ವ ಆಫ್ರಿಕದ ಲೆಟಾಲಿಲ್ ಓಲ್ಡುವೈ ಮತ್ತು ಕನಮ್ ನೆಲೆಗಳಲ್ಲೂ ಈಶಾನ್ಯ ಭಾಗದ ಓಮೊ ಮತ್ತು ಹಡಾಲ್ಟ್ ನೆಲೆಗಳಲ್ಲೂ ಚೌಡ್ ಮತ್ತು ಇಸ್ರೇಲಿನ ಉಬೇದಿಯಾ ನೆಲೆಗಳಲ್ಲೂ ಫ್ರಾನ್ಸಿನ ವ್ಯಾಲೊನೆಟ್ ಮತ್ತು ಅಬ್ಬೆವಿಲೆ, ಜರ್ಮನಿಯ ಮಾವೆರ್ ಮತ್ತು ರುಮೇನಿಯಾದ ಬುಗಿಯಲೆಸ್ಟಿ ನೆಲೆಗಳಲ್ಲೂ ಆದಿಮಾನವ ಸಂಸ್ಕøತಿಯ ಅವಶೇಷಗಳು ಸಿಕ್ಕಿವೆ. ಅವನ್ನು ಸುಮಾರು 26 ಲಕ್ಷ ವರ್ಷಗಳ ಹಿಂದಿನ ಕಾಲಕ್ಕೆ ಖ್ಯಾತ ಪುರಾತತ್ವಜ್ಞ ಲೀಕಿ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಓಲ್ಡುವೈ ನೆಲೆ ಮೊತ್ತಮೊದಲಿಗೆ ಬೆಳಕಿಗೆ ಬಂದುದೇ ಅಲ್ಲದೆ ಬಹಳ ಹೆಚ್ಚಿನ ಸಾಕ್ಷ್ಯಗಳನ್ನು ನೀಡಿರುವ ಪ್ರಮುಖ ನೆಲೆ. ಆದುದರಿಂದ ಇಡೀ ಸಂಸ್ಕøತಿಗೆ ಓಲ್ಡೊವನ್ ಸಂಸ್ಕøತಿಯೆಂದು ಹೆಸರಾಗಿದೆ. ತಾಂಜಾನಿಯದಲ್ಲಿರುವ ಈ ನೆಲೆಯಲ್ಲಿ ಸುಮಾರು 91 ಮೀ. ಆಳದ ಕಮರಿಯಲ್ಲಿ ಅತಿ ಪ್ರಾಚೀನ ಸರೋವರದ ಹೂತುಹೋದ ನೆಲೆ ಇದೆ. ಅದರ ಉತ್ಖನನದಲ್ಲಿ ಪುರಾತನ ಶಿಲಾಯುಗ ಸಂಸ್ಕøತಿಯ ಉಗಮ ಮತ್ತು ವಿಕಾಸಗಳನ್ನು ರೂಪಿಸುವ ಸುಮಾರು 26 ಲಕ್ಷ ವರ್ಷಗಳ ಹಿಂದಿನಿಂದ ಸುಮಾರು 6 ಲಕ್ಷ ವರ್ಷಗಳ ವರೆಗಿನ ಅನೇಕ ಪದರಗಳನ್ನು ಗುರ್ತಿಸಲಾಗಿದೆ. ಮಾನವ ದೇಹದ ಪಳೆಯುಳಿಕೆಗಳ ಮತ್ತು ರೂಪಿಸಿದ ಆಯುಧಗಳ, ಬಳಸಿದ ಆಹಾರದ ಅವಶೇಷಗಳು ಕಂಡುಬಂದಿವೆ. 

ಮೊದಲ ಬಾರಿಗೆ ಮಾನವ ಆ ಸರೋವರದ ದಡದಲ್ಲಿ ಮೃದುವಾದ ಮಣ್ಣಿನ ಮೇಲೆ ವಾಸಿಸುತ್ತಿದ್ದ. ಅವನು ಬಳಸಿದ ಕಲ್ಲಿನಾಯುಧಗಳು, ಕೊಂದು ತಿಂದ ಪ್ರಾಣಿಗಳ ಮೂಳೆಗಳು ಬೇಗ ಬೆಳೆಯುತ್ತಿದ್ದ ಮಣ್ಣಿನ ಪದರಗಳಲ್ಲಿ ಹೂತು ಹೋಗುತ್ತಿದ್ದುವು. ಉಂಡೆ ಕಲ್ಲಿನಲ್ಲಿ ನಿರ್ಮಿಸಿದ ಕೆಲವು ಚಕ್ಕೆ ಕಲ್ಲಿನ ಆಯುಧಗಳು ಮತ್ತು ಮೂಳೆಗಳನ್ನು ಸೀಳಿ ಅದರೊಳಗಿನ ಕೊಬ್ಬನ್ನು ಹೊರತೆಗೆದು ಉಪಯೋಗಿಸಿದ್ದಕ್ಕೆ ಸಾಕ್ಷ್ಯ ದೊರಕುವುದರಿಂದ ಆಗಿನ ಮಾನವ ಜೀವನದ ರೀತಿಯ ಬಗ್ಗೆ ಒಂದು ಸ್ಥೂಲ ಚಿತ್ರ ದೊರಕುತ್ತದೆ. ಆ ಮಾನವನ ವಿವಿಧ ಚಟುವಟಿಕೆಗಳ ಬಗ್ಗೆ ದೊರಕಿರುವ ಸಾಕ್ಷ್ಯಾಧಾರಗಳ ಸಹಾಯದಿಂದ ಲೀಕಿ ಮುಂತಾದ ವಿದ್ವಾಂಸರು ಆಗಿನ ಮಾನವನನ್ನು ಹೋಮೋ ಹ್ಯಾಬಿಲಿಸ್ ಅಥವಾ ನೈಜ ಮಾನವನೆಂದು ಕರೆದಿದ್ದಾರೆ. 17 1/2 ಲಕ್ಷಗಳಷ್ಟು ಹಿಂದಿನ ಪದರಗಳಲ್ಲಿ ಅದೇ ವರ್ಗದ, ಆದರೆ ಸ್ವಲ್ಪ ಮುಂದುವರಿದ, ಮಾನವ ಅವಶೇಷಗಳೊಂದಿಗೆ, ಚರ್ಮವನ್ನು ಹದಗೊಳಿಸಲು ಬಳಸಿದ್ದರಿಂದ ಉಂಟಾದ ನುಣುಪಿನಿಂದೊಡಗೂಡಿದ ಮೂಳೆಯ ಆಯುಧ, ಆಮೆ, ವಿಶಿಷ್ಟ ಜಾತಿಯ ಮೀನು ಇವುಗಳ ಅವಶೇಷಗಳು ದೊರೆತಿವೆ. ಇವುಗಳಿಂದ ಆ ಮಾನವನ ಬದಲಾದ ಜೀವನ ಕ್ರಮವನ್ನು ತಿಳಿಯಬಹುದು. ಆ ಕಾಲದಲ್ಲಿ ಕಲ್ಲು ಗುಂಡುಗಳಿಂದ ಒಂದು ರೀತಿಯ ವಸತಿ ನಿವೇಶನವನ್ನು ರಚಿಸಿಕೊಂಡಿದ್ದಕ್ಕೂ ಆಧಾರವಿದೆ. ಅದೇ ಕಾಲದ ಮತ್ತು ಇನ್ನೂ ಹಿಂದಿನ (ಸುಮಾರು 50 ಲಕ್ಷ ವರ್ಷ) ಅವಶೇಷಗಳನ್ನು ಉತ್ತರ ಕೀನ್ಯದ ರುಡಾಲ್ಫ್ ಸರೋವರದ ಬಳಿಯಲ್ಲೂ ದಕ್ಷಿಣ ಇಥಿಯೋಪಿಯದ ಓಮೊ ಕಣಿವೆಯಲ್ಲೂ ಇತ್ತೀಚೆಗೆ ಕಾಣಲಾಗಿದೆ. ಅವುಗಳ ಬಗ್ಗೆ ಪೂರ್ಣ ಮಾಹಿತಿಗಾಗಿ ಇನ್ನೂ ಕಾಯಬೇಕಾಗಿದೆ. 
ಫ್ರಾನ್ಸಿನ ದಕ್ಷಿಣ ಸಮುದ್ರ ತೀರದಲ್ಲಿರುವ ಮೆಂಟಾನ್ ಬಳಿಯ ವ್ಯಾಲೋನಿಟ್ ಗುಹೆಯಲ್ಲಿ ಯೂರೋಪಿನ ಪ್ರಾಚೀನತಮ ಮಾನವನ ಅವಶೇಷಗಳು (ಸುಮಾರು 15 ಲಕ್ಷ ವರ್ಷ) ಕಂಡುಬಂದಿವೆ. ಸುಮಾರು ಅದೇ ಕಾಲದ ವಸ್ತುಗಳು ರುಮೇನಿಯದ ಬುಗಿಯಲೆಸ್ಟಿ ಎಂಬಲ್ಲಿ ದೊರಕಿವೆ. ಈ ಗುಂಪಿನ ನೆಲೆಗಳಲ್ಲಿ ಜರ್ಮನಿಯ ಹೈಡಲ್‍ಬರ್ಗ್ ಬಳಿಯ ಮಾವೆರ್ ಎಂಬಲ್ಲಿ ದೊರಕಿದ ಮಾನವ ದವಡೆ ಸ್ವಲ್ಪ ಈಚಿನದಾಗಿರಬಹುದು. ಅದರೊಂದಿಗೆ 35 ಕಲ್ಲಿನಾಯುಧಗಳು ದೊರಕಿವೆ. ದಕ್ಷಿಣ ಫ್ರಾನ್ಸಿನ ಎಸ್ಕಾಲೆ ಎಂಬ ಗುಹೆಯಲ್ಲಿ ಆಗಿನ ಒಲೆಗಳು ಕಂಡುಬಂದಿವೆ. ಇವು ಬೆಂಕಿಯ ಪ್ರಾಚೀನತಮ ಬಳಕೆಯ ಸಾಕ್ಷ್ಯವನ್ನೊದಗಿಸುತ್ತವೆ. ಈಚಿನ ವೈಜ್ಞಾನಿಕ ಕಾಲಗಣನಾ ವಿಧಾನಗಳಿಂದ ಜಾವಾದ ಜಿಟಿಸ್ ಪದರಗಳಲ್ಲಿ ಸಿಕ್ಕಿರುವ ಹೋಮೊ ಎರೆಕ್ಟಸ್ ಮಾನವನ ಕಾಲವನ್ನು 19 ಲಕ್ಷ ವರ್ಷಗಳಷ್ಟು ಹಿಂದಿನದೆಂದು ನಿರ್ಧರಿಸಲಾಗಿದೆ. ಚೀನದ ಸಂದೇಹಾಸ್ಪದವಾದ ಸಿ-ಹೂ-ಟು ನೆಲೆಯ ವಿನಾ ಏಷ್ಯದ ಬೇರಾವ ನೆಲೆಯಲ್ಲೂ ಅಷ್ಟು ಪ್ರಾಚೀನ ಕಲ್ಲಿನ ಆಯುಧಗಳು ಸಿಕ್ಕಿಲ್ಲ. ಈವರೆಗೆ ನಮೂದಿಸಿದ ಸಂಗತಿಗಳಿಗೆ ಪುರಾವೆಗಳು ಬಹಳ ಸೀಮಿತವಾಗಿದ್ದರೆ, ಮಧ್ಯ ಪ್ಲೀಸ್ಟೊಸೀನ್ ಯುಗದ ಸಂಸ್ಕøತಿಯ ಬಗ್ಗೆ ಹೆಚ್ಚು ನಿರ್ದಿಷ್ಟ ಪುರಾವೆಗಳು ಸಿಕ್ಕಿವೆ. ಆ ಕಾಲವನ್ನು 7 1/2 ಲಕ್ಷ ವರ್ಷಗಳಿಂದ 1 1/2 ವರ್ಷಗಳ ನಡುವಣದೆಂದು ಭೂ ಕಾಲಗಣನ ಶಾಸ್ತ್ರಜ್ಞರು ನಿರ್ಧರಿಸಿದ್ದಾರೆ. ಆಗ ಮಾನವ ಪೀಳಿಗೆಯಲ್ಲಿ ಸುಧಾರಣೆಯುಂಟಾಗಿ ಹೋಮೊ ಎರಕ್ಟಸ್ ಸಂತತಿಯ ಮುಂದುವರಿದ ವರ್ಗಗಳು ಮತ್ತು ಸ್ಟಾನ್ಸ್‍ಕೂಂಬ್ ಮತ್ತು ಸ್ಟೇನ್‍ಹೀಮ್‍ಗಳಲ್ಲಿ ಸಿಕ್ಕಿದ ನಿಯಾಂಡರ್‍ತಾಲ್ ಸಂತತಿಯ ಮೂಲ ಪುರುಷರ ವರ್ಗಗಳು ಅಸ್ತಿತ್ವದಲ್ಲಿದ್ದವು. ಇವರು ನೈಜ ಮಾನವರೆಂದು ಹೇಳಬಹುದಾಗಿದೆ. ಆಯುಧ ತಯಾರಿಕಾ ದೃಷ್ಟಿಯಿಂದ ನೋಡಿದಾಗ ಈ ಜನ ಆಬ್ಬೆವಿಲಿಯನ್, ಆಷ್ಯೂಲಿಯನ್ ಮುಂತಾದ ಕೈಗೊಡಲಿ ಸಂಸ್ಕøತಿ ನಿರ್ಮಾಪಕರು. ಈ ಹಂತದ ಆಯುಧೋಪಕರಣಗಳು ಪ್ರಾಚೀನ ವಿಶ್ವದ ಪಶ್ಚಿಮ ಭಾಗದಲ್ಲಿ, ಅಂದರೆ ಭಾರತದವರೆಗೆ ಬಳಕೆಯಲ್ಲಿದ್ದುವು. ಪೂರ್ವ ಏಷ್ಯದಲ್ಲಿ, ಅಂದರೆ ಭಾರತದ ವಾಯುವ್ಯ ಭಾಗ, ಚೀನ, ಬರ್ಮ, ಮಲೇಷಿಯ ಮತ್ತು ಇಂಡೊನೇಷಿಯ ಪ್ರದೇಶಗಳಲ್ಲಿ, ಆ ಮೊದಲಿನ ಉಂಡೆ ಕಲ್ಲಿನಾಯುಧಗಳ ಸುಧಾರಿತ ಆವೃತ್ತಿಗಳು ರೂಢಿಯಲ್ಲಿದ್ದವು. ಹೀಗಾಗಿ ಆ ಸಮಯದಲ್ಲಿ ಎರಡು ಭಿನ್ನ ಸಂಸ್ಕøತಿ ರೂಪಗಳು ಹುಟ್ಟಿಕೊಂಡುವು ಮತ್ತು ಈ ವೇಳೆಗೆ ಸಸ್ಯಜನ್ಯ ಆಹಾರ ಸಂಗ್ರಹಣೆ ಅಲ್ಪಪ್ರಮಾಣದಲ್ಲಿ ರೂಢಿಯಲ್ಲಿದ್ದರೂ, ಬೇಟೆಗಾರಿಕೆಯಿಂದ ರೂಢಿಸಿದ ಮಾಂಸಾಹಾರ ಪ್ರವೃತ್ತಿ ಪ್ರಮುಖವಾಯಿತು. ಆ ಯುಗದಲ್ಲಿ ಮಾನವ ವಸತಿಯ ಭೂ ಪ್ರದೇಶ ಬಹಳ ವಿಸ್ತಾರವಾಯಿತು. ಸುಮಾರು 50,000 ವರ್ಷಗಳವರೆಗೂ ಅದು ಮತ್ತೆ ವಿಸ್ತಾರಗೊಳ್ಳಲಿಲ್ಲ; ಸಮುದ್ರ, ಎತ್ತರವಾದ ಪರ್ವತ ಸ್ತೋಮಗಳು ಮತ್ತು ಕಷ್ಟಕರವಾದ ವಾಯುಗುಣದಿಂದುಂಟಾದ ಅನಾನುಕೂಲಕರ ಪರಿಸರಣ ಈ ಅಂಶಗಳು ಮಾನವ ವಸತಿಯ ಮೇರೆಗಳನ್ನು ಸಂಕುಚಿತಗೊಳಿಸಿದ್ದುವು. ಈ ವಿಶಾಲ ಭೂ ಭಾಗದಲ್ಲಿದ್ದ ವೈವಿಧ್ಯಮಯವಾದ ವಾಯುಗುಣಗಳಿಗೆ ತಕ್ಕ ತಾಂತ್ರಿಕ ಸಾಂಸ್ಕøತಿಕ ಹೊಂದಾಣಿಕೆಗಳನ್ನು ಮಾಡಿಕೊಂಡ ಮಾನವನ ಪ್ರಾದೇಶಿಕ ಸಂಸ್ಕøತಿಗಳಲ್ಲಿ ಬಹಳ ವ್ಯತ್ಯಾಸಗಳೇರ್ಪಟ್ಟರೂ ಮೂಲಭೂತವಾದ ಸಾದೃಶ್ಯಗಳು ಇದ್ದವು. 

ಮಧ್ಯ ಪ್ಲೀಸ್ಟೊಸೀನ್ ಯುಗ ನಿಧಾನವಾಗಿಯಾದರೂ ಒಂದೇ ಸಮನಾಗಿ ಪ್ರಗತಿ ಸಾಧಿಸುತ್ತಿದ್ದ ಕಾಲ. ಮಾನವನ ಮಿದುಳು ದೊಡ್ಡದಾಗುತ್ತ ನಡೆದು ಹೊಸ ಸಾಧನೆಗಳಿಗೆ ದ್ಯೋತಕವಾಯಿತು; ಶರೀರ ರಚನೆಯಲ್ಲೂ ಹಲವಾರು ಬದಲಾವಣೆಗಳು ಸಂಭವಿಸಿ ಆಧುನಿಕ ಮಾನವನ ಸಂತತಿಯತ್ತ ಅದು ತ್ವರಿತವಾಗಿ ಸಾಗುತ್ತಿತ್ತು. ಅವನ ಸಾಂಸ್ಕøತಿಕ ಸಾಧನೆಗಳು ಸುಧಾರಿತಗೊಳ್ಳುತ್ತಿದ್ದುವು; ಭಾಷೆ ಮತ್ತು ಸಂಪರ್ಕ ಶಕ್ತಿ ಉತ್ತಮಗೊಳ್ಳುತ್ತಿದ್ದುವು. ಅವನು ಹೆಚ್ಚು ಉಪಯುಕ್ತ ಆಯುಧೋಪಕರಣಗಳನ್ನು ತಯಾರಿಸಬಲ್ಲವನಾಗಿದ್ದ; ಒಟ್ಟಿನಲ್ಲಿ ಹಲವಾರು ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಿ ಸರ್ವತೋಮುಖ ಪ್ರಮುಖ ಪ್ರಗತಿಯ ಹಾದಿಯಲ್ಲಿ ಅವನು ಮುಂದುವರಿಯುತ್ತಿದ್ದನೆಂದು ಹೇಳಬಹುದು.

ಕಲ್ಲಿನ ಆಯುಧಗಳ ತಯಾರಿಕೆಯ ದೃಷ್ಟಿಯಿಂದ ಆ ಕಾಲದಲ್ಲಿ ವಿವಿಧೋದ್ದೇಶಗಳಿಗೆ ಉಪಯುಕ್ತವಾದ ಸಾಮಾನ್ಯ ಆಯುಧಗಳು ಹೆಚ್ಚು ಬಳಕೆಯಲ್ಲಿದ್ದುವು. ಯಾವುದೇ ನಿರ್ದಿಷ್ಟ ಉದ್ದಿಶ್ಯದ ಆಯುಧಗಳು ಬಹಳ ವಿರಳ. ನಿರ್ದಿಷ್ಟ ರೂಪದ ಆಯುಧ ತಯಾರಿಕೆಗೆ ಗಮನ ನೀಡಿ ಕೆಲವು ವಿಧವಾದ ಕೈಗೊಡಲಿ ಮತ್ತು ಸೀಳು ಕೊಡಲಿಗಳನ್ನು ಸಾಧಾರಣವಾಗಿ ಎಲ್ಲೆಡೆಗಳಲ್ಲು ತಯಾರಿಸಲಾಗುತ್ತಿತ್ತು. ಕಲ್ಲಿನ ಆಯುಧಗಳನ್ನು ಬೇಕಾದಾಗ ತಯಾರಿಸಿ ತತ್ಕಾಲದ ಉಪಯೋಗದ ಅನಂತರ ಅಲ್ಲೆ ಎಸೆದುಬಿಡುತ್ತಿದ್ದುದರಿಂದ ಮತ್ತು ಅವು ದೀರ್ಘ ಕಾಲ ಉಳಿಯುತ್ತಿದ್ದುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಸಿಕ್ಕುತ್ತವೆ. ಆದರೆ, ಮೂಳೆ ಮತ್ತು ಮರದ ಆಯುಧಗಳು ಬೇಗ ನಾಶವಾಗುತ್ತಿದ್ದುದರಿಂದ ಅವು ಬಹಳ ವಿರಳವಾಗಿವೆ. ಅವನ್ನು ಅಧಿಕ ಸಂಖ್ಯೆಯಲ್ಲಿ ತಯಾರಿಸುತ್ತಿದ್ದುದರಿಂದ ಅವುಗಳ ತಯಾರಿಕೆಯಲ್ಲಿ ಬೇಗ ಪ್ರಾವೀಣ್ಯ ಪಡೆಯಲು ಸಾಧ್ಯವಾಯಿತು. ತಯಾರಿಕೆಯ ವಿಧಾನಗಳು ಒಂದು ಮಟ್ಟವನ್ನು ತಲುಪಿದ ಅನಂತರ ಬಹುಕಾಲ ಅದೇ ಮಟ್ಟ ಉಳಿದುಬಂತು. ಆದರೂ ಆ ಕಾಲದ ಮಾನವರು ಹೆಚ್ಚು ಬುದ್ಧಿಶಾಲಿಗಳಾಗಿದ್ದರು. ಅವನ್ನು ಅವರು ಸುಧಾರಿಸಿಕೊಳ್ಳುತ್ತಿದ್ದುದರಲ್ಲಿ ಸಂದೇಹವಿಲ್ಲ.

ಸಾಂಸ್ಕøತಿಕವಾಗಿ ಪಶ್ಚಿಮ ವಲಯದಲ್ಲಿ ಅಷ್ಯೂಲಿಯನ್ ಕೈಗೊಡಲಿ ಸಂಸ್ಕøತಿ ಪ್ರಬಲವಾಗಿದ್ದು ಆಫ್ರಿಕ, ನೈಋತ್ಯ ಯೂರೋಪು ಮತ್ತು ಭಾರತದವರೆಗಿನ ನೈಋತ್ಯ ಏಷ್ಯದಲ್ಲಿ ಹಬ್ಬಿತ್ತು. ಪೂರ್ವ ಏಷ್ಯದಲ್ಲಿ ಈ ಸಂಸ್ಕøತಿ ಹಬ್ಬಲಿಲ್ಲ. ಆ ಪ್ರದೇಶದಲ್ಲಿ ಹಿಂದಿನ ಉಂಡೆ ಕಲ್ಲಿನಾಯುಧಗಳ ಬಳಕೆ ಮುಂದುವರಿದು, ಕ್ರಮೇಣ ಸುಧಾರಿತ ಚಕ್ಕೆ ಕಲ್ಲಿನಾಯುಧಗಳ ಬಳಕೆಯನ್ನು ಪಶ್ಚಿಮ ವಲಯದಿಂದ ಪಡೆದುಕೊಂಡಂತೆ ತಿಳಿದುಬರುತ್ತದೆ. ಅಷ್ಯೂಲಿಯನ್ ಕೈಗೊಡಲಿ ಸಂಸ್ಕøತಿ ಪಶ್ಚಿಮ ವಲಯದಲ್ಲಿ ಸಾಮಾನ್ಯವಾಗಿತ್ತೆಂದ ಮಾತ್ರಕ್ಕೆ, ಆ ಇಡೀ ಪ್ರದೇಶದ ಜನಜೀವನ ಒಂದೇ ರೀತಿಯಲ್ಲಿತ್ತೆಂದು ಭಾವಿಸಲಾಗದು. ವಿವಿಧ ಪ್ರದೇಶಗಳಲ್ಲಿ ಅಲ್ಲಿನ ಪರಿಸರ ಅಲ್ಲಿ ಸಿಕ್ಕುತ್ತಿದ್ದ ಕಲ್ಲಿನ ಗುಣ ಮತ್ತು ಇತರ ಅಂಶಗಳ ಪ್ರಭಾವದಿಂದ ಸ್ಥಳೀಯ ವೈಶಿಷ್ಟ್ಯಗಳು ಏರ್ಪಟ್ಟಿದ್ದುವು. ಈ ರೀತಿಯ ಪ್ರಾದೇಶಿಕ ವೈಪರೀತ್ಯಗಳಲ್ಲಿ ಉತ್ತರ ಆಫ್ರಿಕ ಮತ್ತು ನೈಋತ್ಯ ಯೂರೋಪಿನ ಸಂಸ್ಕøತಿಗಳಲ್ಲಿ ಹೆಚ್ಚಿನ ಸಾಮ್ಯಗಳಿದ್ದರೆ, ದಕ್ಷಿಣ ಆಫ್ರಿಕ, ಪಶ್ಚಿಮ ಏಷ್ಯ ಮತ್ತು ಭಾರತ ಪ್ರದೇಶಗಳಲ್ಲಿ ನೆಲೆಸಿದ್ದ ಸಂಸ್ಕøತಿಗಳಲ್ಲಿ ಹೆಚ್ಚು ಸಾದೃಶ್ಯಗಳಿದ್ದುವು. ಅವುಗಳಲ್ಲಿ ಸ್ಥಳೀಯ ವೈವಿಧ್ಯಗಳನ್ನು ಕಾಣಬಹುದಾಗಿತ್ತು. ಆಗಿನ ಮಾನವರು ವಿವಿಧ ಪ್ರದೇಶಗಳ ವಿಶಿಷ್ಟ ಪರಿಸರಕ್ಕೆ ಹೊಂದಿಕೊಂಡು ತಮ್ಮ ಜೀವನ ಕ್ರಮವನ್ನು ರೂಢಿಸಿಕೊಳ್ಳುವ ಸಾಮಥ್ರ್ಯ ಪಡೆದಿದ್ದರು. ಕ್ರಮೇಣ ಪುರಾತನ ಶಿಲಾಯುಗದ ಕೊನೆಯ ವೇಳೆಗೆ ಪ್ರಾದೇಶಿಕ ಮತ್ತು ಸ್ಥಳಿಯ ವೈವಿಧ್ಯಗಳು ಪ್ರಬಲಗೊಂಡು, ಅವುಗಳ ನಡುವೆ ಇದ್ದ ಸಾದೃಶ್ಯಗಳು ಮಾಯವಾಗತೊಡಗಿದವು. 

 ಇದೇ ಸುಮಾರಿನಲ್ಲೇ ಉತ್ತರ ಭಾಗದ ಶೀತ ವಲಯಕ್ಕೂ ಮಾನವ ವಸತಿ ಹಬ್ಬಿತು. ಬೆಂಕಿಯ ಉಪಯೋಗ ಇದಕ್ಕೆ ಮುಖ್ಯ ಕಾರಣ. ಮಿಂಡೆಲ್ ಹಿಮಯುಗದಲ್ಲಿ ಯೂರೇಷಿಯ ಮತ್ತು ಉತ್ತರ ಚೀನಗಳಲ್ಲಿ ಬೆಂಕಿಯನ್ನು ಬಳಸುತ್ತಿದ್ದುದಕ್ಕೆ ಆಧಾರಗಳು ಸಿಕ್ಕಿವೆ. ಬೆಂಕಿ ಶಾಖವನ್ನು ಕೊಟ್ಟು, ಬಟ್ಟೆಯ ಉಪಯೋಗಕ್ಕೆ ಪೂರ್ವದ ಕಾಲದಲ್ಲಿ ಮಾನವ ದೇಹವನ್ನು ಬೆಚ್ಚಗೆ ಇಡಲೂ, ಕತ್ತಲಾದ ಅನಂತರ ಬರುತ್ತಿದ್ದ ದುಷ್ಟ ಮೃಗಗಳಿಂದ ರಕ್ಷಣೆಗಾಗಿಯೂ, ಬೆಳಕಿಗಾಗಿಯೂ ಬಳಸಲಾಗುತ್ತಿತ್ತು. ಮರದ ಆಯುಧಗಳ ತಯಾರಿಕೆಯ ಸಾಧನವಾಗಿಯೂ ಆಹಾರವನ್ನು ಬೇಯಿಸುವುದೇ ಮುಂತಾದವಕ್ಕೂ ಅದು ಉಪಯುಕ್ತವಾಗಿತ್ತು. ಬೆಂಕಿಯಲ್ಲಿ ಸುಟ್ಟ ಅನಂತರ ಮರದ ದೊಣ್ಣೆಗಳನ್ನು ಹೆರೆಯುವ ಆಯುಧಗಳಿಂದ ಸುಲಭವಾಗಿ ರೂಪಿಸಬಹುದಿತ್ತು. ಹಲವು ವಿಧವಾದ ಆಹಾರ ಪದಾರ್ಥಗಳು ಬೇಯಿಸಿದ ಮೇಲೆ ತಿನ್ನಲು ಯೋಗ್ಯವಾಗುತ್ತಿದ್ದವು. ಮತ್ತೆ ಕೆಲವನ್ನು ಬೇಯಿಸಿದ ಮೇಲೆ ಅಗಿದು ತಿನ್ನಲು ಸುಲಭವಾಗುತ್ತಿತ್ತು. ಆದ್ದರಿಂದ ಹಲವು ಹೊಸ ಆಹಾರ ಪದಾರ್ಥಗಳ ಬಳಕೆ ಸಾಧ್ಯವಾಯಿತು. ಇದರಿಂದಾಗಿ ಮಾನವನ ಶರೀರ ರಚನಾಕ್ರಮದಲ್ಲಿ, ಮುಖ್ಯವಾಗಿ ಹಲ್ಲುಗಳ ಜೋಡಣೆ, ಮುಖ ವಿನ್ಯಾಸಗಳಲ್ಲಿ ಬದಲಾವಣೆ ಉಂಟಾಗಿ ಮಂಗಾಕೃತಿಯಿಂದ ಮಾನವ ರೂಪದತ್ತ ಸರಿಯಲು ಸಾಧ್ಯವಾಯಿತು.

ಈ ಮೊದಲೇ ಹೇಳಿದಂತೆ ಅಷ್ಯೂಲಿಯನ್ ಸಂಸ್ಕøತಿಯ ಪ್ರಧಾನ ಆಯುಧವಾದ ಕೈಗೊಡಲಿಯ ಉಪಯೋಗದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅದನ್ನು ವಿವಿಧೋದ್ದೇಶ ಸಲಕರಣೆಯೆಂದು ಅನೇಕರು ಭಾವಿಸಿದ್ದರೂ ಮತ್ತೆ ಕೆಲವರು ಅದರ ಉಪಯೋಗ ಸೀಮಿತವಾಗಿತ್ತೆಂದು ಹೇಳಿದ್ದಾರೆ. ಬಹುಶಃ ಭೂಮಿಯೊಳಗಿಂದ ಗೆಡ್ಡೆಗೆಣಸುಗಳನ್ನು ಅಗೆದು ತೆಗೆಯುವುದು. ಬೇಟೆಯಲ್ಲಿ ಉಪಯೋಗಿಸುತ್ತಿದ್ದ ಮರದ ಈಟಿ, ಭರ್ಜಿಗಳ ತುದಿಗೆ ಜೋಡಿಸುವುದು. ಅದರ ಹರಿತವಾದ ಪಾಶ್ರ್ವಗಳಿಂದ ಸತ್ತ ಪ್ರಾಣಿಗಳ ಚರ್ಮವನ್ನು ಕತ್ತರಿಸುವುದು ಮತ್ತು ಮಾಂಸವನ್ನು ತುಂಡು ಮಾಡುವುದು, ಗಟ್ಟಿಯಾದ ಕಾಯಿ ಮೂಳೆಗಳನ್ನು ಜಜ್ಜುವುದು ಮುಂತಾದ ಕಾರ್ಯಗಳಿಗೆ ಅದನ್ನು ಬಳಸುತ್ತಿದ್ದಿರಬಹುದು. ಆದರೆ, ಅದು ಅನಿವಾರ್ಯವಲ್ಲವೆಂಬುದಾಗಿ ಕ್ರಮೇಣ ಅದರ ಬಳಕೆ ಕ್ಷೀಣವಾದ್ದರಿಂದ, ಊಹಿಸುವುದು ಸಾಧ್ಯ. ಪುರಾತನ ಶಿಲಾಯುಗದ ಅಂತ್ಯ ಕಾಲದಲ್ಲಿ ಹೊಸದಾದ, ಇನ್ನೂ ಉತ್ತಮವಾದ, ಬೇರೆ ಸಲಕರಣೆಗಳಿಂದ ಅಂಥ ಕಾರ್ಯಗಳನ್ನು ಸಾಧಿಸಲಾಗುತ್ತಿತ್ತು. ಅರಣ್ಯಗಳು ದಟ್ಟವಾಗಿದ್ದ ಪ್ರದೇಶಗಳಲ್ಲಿ ಹೆಚ್ಚು ಬಳಕೆಗೆ ಬಂದ ಸೀಳುಗೊಡಲಿಯನ್ನು (ಕ್ಲೀವರ್) ಮರಗಳನ್ನು ಕಡಿಯಲು, ಮರದ ಉಪಕರಣಗಳನ್ನು ತಯಾರಿಸಲು ಉಪಯೋಗಿಸಲಾಗಿರಬಹುದು. ಆಗ ಗಟ್ಟಿ ಆಯುಧಗಳೊಂದಿಗೆ ಅನೇಕ ರೀತಿಯ ಚಕ್ಕೆ ಕಲ್ಲಿನಾಯುಧಗಳು ಬಳಕೆಯಲ್ಲಿದ್ದುವು. ಹೆರೆಯುವ ಆಯುಧವನ್ನು (ಸ್ಕ್ರೇಪರ್) ಚಾಕುವಿನಂತೆ ಉಪಯೋಗಿಸಲಾಗುತ್ತಿತ್ತಲ್ಲದೆ ಮರದ ತೊಗಟೆಗಳನ್ನು ಹೆರೆದು ತೆಗೆಯಲು ಚರ್ಮಕ್ಕೆ ಅಂಟಿಕೊಂಡಿರುತ್ತಿದ್ದ ತುಪ್ಪಳವನ್ನೂ ಮೂಳೆ ಮಾಂಸಗಳ ತುಣುಕುಗಳನ್ನು ಹೆಕ್ಕಿ ತೆಗೆಯಲೂ ಅದು ಉಪಯುಕ್ತವಾಗಿತ್ತು. ಚಕ್ಕೆ ಕಲ್ಲಿನಿಂದ ಮಾಡಿದ ಮೊನೆಗಳನ್ನು (ಪಾಯಿಂಟ್ಸ್) ಸೂಕ್ಷ್ಮವಾದ ಈಟಿ ಭರ್ಜಿಗಳ ಚೂಪು ತುದಿಯಾಗಿ ಉಪಯೋಗಿಸಲಾಗುತ್ತಿತ್ತು. ಚರ್ಮದಲ್ಲಿ ತೂತು ಕೊರೆದು ಗುಡಾರ ಅಥವಾ ವಸ್ತ್ರಗಳನ್ನು ಹೊಲೆಯಲು ದಬ್ಬಳ ಉಪಯುಕ್ತವಾಗಿತ್ತು. ಆಫ್ರಿಕ ಮತ್ತು ನೈಋತ್ಯ ಯೂರೋಪನ್ನು ಬಿಟ್ಟರೆ ಇತರ ಎಡೆಗಳಲ್ಲಿ ಕೈಗೊಡಲಿ ಬಳಕೆಗೆ ಬರಲಿಲ್ಲ. ಬಹುಶಃ ಆ ಪ್ರದೇಶಗಳ ಅಂಥ ಚೂಪಾದ ಮೊನೆಯುಳ್ಳ ಆಯುಧ ಅವಶ್ಯಕವೆನಿಸಲಿಲ್ಲ; ಅಥವಾ ಅದರ ತಯಾರಿಕೆಯ ತಂತ್ರ ಅವರಿಗೆ ಹೊಳೆಯಲಿಲ್ಲ. ಮಧ್ಯ ಪ್ಲೀಸ್ಟೊಸೀನ್ ಯುಗದ ಆ ಸಂಸ್ಕøತಿಗಳಲ್ಲಿ ಕೈಗೊಡಲಿಯನ್ನು ಬಿಟ್ಟರೆ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಹಲವು ಬಗೆಯ ಚಕ್ಕೆ ಕಲ್ಲಿನಾಯುಧಗಳು ಮತ್ತು ಹಿಂದಿನಿಂದಲೂ ಬಳಕೆಯಲ್ಲಿದ್ದ ಉಂಡೆಕಲ್ಲಿನಾಯುಧಗಳು ಸಾಮಾನ್ಯವಾಗಿದ್ದುವು. ಆದ್ದರಿಂದ ಆ ಕಾಲದಲ್ಲಿ ದ್ವಿವಿಧ ಸಂಸ್ಕøತಿ ಇತ್ತೆಂದು ಭಾವಿಸುವುದಕ್ಕಿಂತಲೂ, ಬೇರೆ ಪ್ರದೇಶಗಳ ಮಾನವಕಾರ್ಯರೀತಿ ಬೇರೆಯದಾಗಿತ್ತೆಂದು ಹೇಳುವುದು ಸರಿಯಾಗುತ್ತದೆ.

ಮೊದಲಿಗೆ ಆಫ್ರಿಕ ಮತ್ತು ನೈಋತ್ಯ ಯೂರೋಪಿಗೆ ಸೀಮಿತವಾಗಿದ್ದ ಕೈಗೊಡಲಿ ಸಂಸ್ಕøತಿ ಕ್ರಮೇಣ ಯೂರೋಪಿನ ಇತರ ಭಾಗಗಳು, ಮಧ್ಯಪ್ರಾಚ್ಯ ಮತ್ತು ಭಾರತದವರೆಗೆ ಹರಡಿತು. ಅಲ್ಲಿಂದ ಮುಂದೆ ಹರಡದಿರುವುದಕ್ಕೆ ಏನು ಕಾರಣವೆಂಬುದು ತಿಳಿದುಬಂದಿಲ್ಲವಾದರೂ ಬಹುಶಃ ಆ ಜನರು ಪರ್ವತ ಮತ್ತು ಸಮುದ್ರಗಳನ್ನು ದಾಟುವ ಸಾಧನಗಳನ್ನು ಹೊಂದಿಲ್ಲದಿದ್ದುದೇ ಕಾರಣವೆಂದು ಊಹಿಸಲಾಗಿದೆ. ಪೂರ್ವ ಯೂರೋಪಿನಲ್ಲೂ ಬಹಳ ಕಾಲ ಮಾನವ ವಾಸಿಸುತ್ತಿರಲಿಲ್ಲ; ಅಥವಾ ಕೈಗೊಡಲಿ ಸಂಸ್ಕøತಿಗೆ ಅನುಕೂಲಕರವಾದ ವಾತಾವರಣ ಇರಲಿಲ್ಲ. ಅಷ್ಯೂಲಿಯನ್ ಸಂಸ್ಕøತಿಯ ಮಾನವರು ಹವೆಯ ಸ್ವಭಾವಕ್ಕನುಗುಣವಾಗಿ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸುತ್ತಿದ್ದರು; ಹಿಮಯುಗದಲ್ಲಿ ಶೀತಪ್ರದೇಶಗಳನ್ನು ತೊರೆದು ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದರು. ಸಮಶೀತೋಷ್ಣ ಮತ್ತು ಉಷ್ಣವಾಯುಗುಣಕ್ಕೆ ಅನುಗುಣವಾದ ಜೀವನಕ್ರಮ ಅವರದಾಗಿತ್ತು. ಆದರೆ ಇತರ ಸಂಸ್ಕøತಿಗಳ ಗುಂಪಿನವರು ವಿಭಿನ್ನ ವಾಯುಗುಣಗಳಿಗೆ ಹೊಂದಿಕೊಂಡು ಜೀವನನಿರ್ವಹಣೆ ಮಾಡಬಲ್ಲವರಾಗಿದ್ದರು. 

ಮಧ್ಯ ಪ್ಲೀಸ್ಟೊಸೀನ್ ಯುಗದ ಉತ್ತರಾರ್ಧದಲ್ಲಿ ಚಕ್ಕೆಕಲ್ಲಿನಾಯುಧಗಳ ನಿರ್ದಿಷ್ಟ ರೀತಿಗಳು ಬಳಕೆಗೆ ಬರಲಾರಂಭಿಸಿದವು. ಈ ಬಗೆಯ ಆಯುಧಗಳನ್ನು ಪೂರ್ವಭಾವಿಯಾಗಿ ತಯಾರಿಸಿದ ಗಟ್ಟಿಗಳಿಂದ ತಯಾರಿಸಲಾಗುತ್ತಿತ್ತು. ಆ ತಯಾರಿಕಾ ತಂತ್ರವನ್ನು ಮೊದಲ ಬಾರಿಗೆ ಫ್ರಾನ್ಸಿನ ಲೆವಾಲ್ವಾ ಎಂಬಲ್ಲಿ ಗುರ್ತಿಸಿದುದರಿಂದ ಆ ಸಂಸ್ಕøತಿಗೆ ಲೆವಾಲ್ವಾಸಿಯನ್ ಸಂಸ್ಕøತಿ ಎಂದು, ಆ ತಯಾರಿಕಾ ತಂತ್ರಕ್ಕೆ ಲೆವಾಲ್ವಾಸಿಯನ್ ತಂತ್ರ ಅಥವಾ ಕೂರ್ಮಗಟ್ಟಿ (ಟಾರ್ಟಾಯಿಸ್ ಕೋರ್) ಎಂದು ಹೆಸರಿಸಲಾಗಿದೆ. ಆ ತಂತ್ರದ ರೀತ್ಯ ಬೇಕಾದ ಚಕ್ಕೆ ಕಲ್ಲಿನಾಯುಧವನ್ನು ಗಟ್ಟಿಯ ಮೇಲೆ ರೂಪಿಸಿ ಅನಂತರ ಒಂದೇ ಏಟಿನಿಂದ ಅದನ್ನು ಬೇರ್ಪಡಿಸಿ ಉಪಯೋಗಿಸುತ್ತಿದ್ದರು. ಮುಂದಾಲೋಚನೆ, ಸೂಕ್ಷ್ಮ ಬುದ್ಧಿಕುಶಲತೆ ಮತ್ತು ತಾಂತ್ರಿಕ ನೈಪುಣ್ಯವನ್ನು ಪ್ರತಿನಿಧಿಸುವ ಈ ತಯಾರಿಕಾ ವಿಧಾನ ಅಷ್ಯೂಲಿಯನ್ ಸಂಸ್ಕøತಿ ಪ್ರಸಾರವಾಗಿದ್ದೆಡೆಗೆಲ್ಲ ಶೀಘ್ರವಾಗಿ ಹರಡಿತು. ಕ್ರಮೇಣ ಅಷ್ಯೂಲಿಯನ್ ಕೈಗೊಡಲಿ ಸಂಸ್ಕøತಿ ಕ್ಷೀಣವಾಗಿ ಚಕ್ಕೆ ಕಲ್ಲಿನ ಪೂರ್ವ ನಿಯೋಜಿತ ಗಟ್ಟಿಗಳಿಂದ ತಯಾರಿಸಿದ ಆಯುಧಗಳು ಪ್ರಮುಖವಾದುವು ಮತ್ತು ಪೂರ್ವ ಮತ್ತು ಮಧ್ಯ ಯೂರೋಪಿನಂಥ ಪ್ರದೇಶಗಳಿಗೂ ಹಬ್ಬಿದವು. 

ಓಲ್ಡುವಾನ್ ಉಂಡೆ ಕಲ್ಲಿನಾಯುಧಗಳಿಂದ ಪ್ರಭಾವಿತವಾಗಿ ಪೂರ್ವ ಯೂರೋಪಿನಲ್ಲಿ ಪ್ರಸಾರದಲ್ಲಿದ್ದ ಅಷ್ಯೂಲಿಯಸ್‍ನಿಂದ ಬೇರಾದ ಸಂಸ್ಕøತಿಗಳನ್ನು ಪ್ರತಿನಿಧಿಸುವ ಹಂಗರಿಯ ವರ್ಟಿಸ್‍ಜೋಲಾಸ್ ನೆಲೆಯ ಅವಶೇಷಗಳು ಗಮನಾರ್ಹ. ಅವು ಮಧ್ಯ ಪ್ಲೀಸ್ಟೊಸೀನ್ ಯುಗದ ಪ್ರಾರಂಭ ಕಾಲಕ್ಕೆ ಸೇರುತ್ತವೆ. ಆ ಜನ ಶೀತಾಧಿಕ್ಯದ ವಾತಾವರಣದಲ್ಲಿ ಬೆಂಕಿಯ ಉಪಯೋಗದಿಂದ ಸುಖವಾಗಿ ಜೀವಿಸುತ್ತಿದ್ದರೆಂದು ಕಂಡುಬರುತ್ತದೆ. ಇಂಗ್ಲೆಂಡಿನ ಕ್ಲಾಕ್ಟನ್-ಅನ್-ಸೀ ನೆಲೆಯ ಅವಶೇಷಗಳು ಹೆಚ್ಚು ಕಡಿಮೆ ಈ ಸಂಸ್ಕøತಿಗೆ ಸೇರುತ್ತವೆ. ಪೂರ್ವ ಏಷ್ಯದಲ್ಲಿ ವಾಸಿಸುತ್ತಿದ್ದ ಆ ಕಾಲದ ಮಾನವರಿಗೂ ಯೂರೋಪಿನ ಈ ಅಷ್ಯೂಲಿಯನ್ನೇತರ ಸಂಸ್ಕøತಿಯವರಿಗೂ ಸಂಪರ್ಕವಿರಲಿಲ್ಲ. ಯೂರೋಷಿಯದ ಮೈದಾನಗಳಲ್ಲಿ ಆಗ ಮಾವನ ವಸತಿ ಇರಲಿಲ್ಲ. ಅಷ್ಯೂಲಿಯನ್ ಸಂಸ್ಕøತಿಯ ಹೊರಸೆರಗಿನಂತಿದ್ದ ಭಾರತದ ಮತ್ತು ಪೂರ್ವ ಏಷ್ಯನ್ ಗಡಿಯಲ್ಲಿದ್ದ ಬರ್ಮದ ಸಂಸ್ಕøತಿಗಳ ಮಧ್ಯೆ ಆ ಕಾಲದಲ್ಲಿ ಯಾವುದೇ ಸಂಪರ್ಕ ಏರ್ಪಟ್ಟಿರಲಿಲ್ಲ. ಪೂರ್ವ ಏಷ್ಯದಲ್ಲಿ ಈವರೆಗೆ ಸಿಕ್ಕಿರುವ, ಜಾವಾದ ಟ್ರೆನಿಲ್ ಪ್ರದೇಶದ ಮತ್ತು ಚೀನದ ಲ್ಯಾಂಟಿಯನ್ ಆಯುಧಗಳು ಮಧ್ಯ ಪ್ಲೀಸ್ಟೊಸೀನ್ ಯುಗದ ಆದಿಕಾಲಕ್ಕೆ ಸೇರಿದವಾದರೂ ಆ ಪ್ರದೇಶಗಳ ಹೋಮೊ ಎರೆಕ್ಟಸ್ ಸಂತತಿಯ ಮಾನವ ಇನ್ನೂ ಹಿಂದಿನ ಕಾಲದಿಂದ ಅಸ್ತಿತ್ವದಲ್ಲಿದ್ದಿರಬಹುದು. ಮತ್ತೊಂದು ಗಮನಾರ್ಹ ಅಂಶವೆಂದರೆ, ಪೂರ್ವ ಏಷ್ಯದ ಆ ಕಾಲದ ಆಯುಧಗಳು ಯಾವುದೇ ರೀತಿಯ ಸುಧಾರಣೆ ಹೊಂದದೆ ದೀರ್ಘಕಾಲ ಒರಟಾಗಿ ಉಳಿದಿದ್ದು ಯೂರೋಪಿನ ಸಮಕಾಲೀನ ಆಯುಧಗಳಿಗಿಂತ ಬಹಳ ಹಿಂದುಳಿದವುಗಳಾಗಿವೆ.

ಅಂತ್ಯ ಪ್ಲೀಸ್ಟೊಸೀನ್ ಈಮಿಯನ್ ಅಂತರ ಹಿಮಯುಗದೊಂದಿಗೆ ಪ್ರಾರಂಭವಾದಾಗ ಆಫ್ರಿಕ, ಯೂರೋಪು ಮತ್ತು ಪಶ್ಚಿಮ ಏಷ್ಯಗಳಲ್ಲಿ ಒಂದು ಹೊಸ ಮಾನವ ಪೀಳಿಗೆ ಕಾಣಿಸಿಕೊಂಡಿತು. ನಿಯಾಂಡರ್‍ತಲಾಯ್ಡ್ ಎಂದು ಕರೆಯಲಾದ, ಅಪಗತಿಯಲ್ಲಿ ಮುನ್‍ಸಾಗಿದ, ಈ ಮಾನವ ಪೀಳಿಗೆಯೊಂದಿಗೆ ಒಂದು ಹೊಸ ಜಾಡಿನ ಕಲ್ಲಿನಾಯುಧಗಳ ಬಳಕೆ ಸಹ ರೂಢಿಗೆ ಬಂತು. ಅದನ್ನು ಮೌಷ್ಟೀರಿಯನ್ ಸಂಸ್ಕøತಿ ಎಂದು ಕರೆಯಲಾಗಿದೆ. ಕ್ರಮೇಣ ಅದನ್ನು ಹೋಲುವ ಸಂಸ್ಕøತಿಯ ಅವಶೇಷಗಳು ಉತ್ತರ ಆಫ್ರಿಕ, ನೈಋತ್ಯ ಯೂರೋಪು ಮತ್ತು ಉತ್ತರ ಚೀನ ಪ್ರದೇಶಗಳಿಗೂ ಹಬ್ಬಿದುವು. ಆ ಮಾನವರ ಮತ್ತು ಆ ಸಂಸ್ಕøತಿಯ ಸುಭದ್ರವಾಗಿ ಕಾಲನಿರ್ಣಯ ಮಾಡಲಾದ, ಅವಶೇಷಗಳು ಈಮಿಯನ್ ಅಂತರ ಹಿಮಯುಗದ ಮಧ್ಯಕಾಲಕ್ಕೆ ಸೇರಿದ ಜರ್ಮನಿಯ ಎರಿಂಗ್‍ಡಾರ್ಫ್ ನೆಲೆಯಲ್ಲಿ ಸಿಕ್ಕಿವೆ. ಬಹುಶಃ ಈ ಸಂಸ್ಕøತಿ ಈಮಿಯನ್ ಯುಗದ ಪ್ರಾರಂಭ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರಬಹುದು. ಹೋಮೋಸೇಪಿಯನ್ ಅಥವಾ ಆಧುನಿಕ ಮಾನವ ಕಾಣಿಸಿಕೊಂಡಾಗ, ಅಂದರೆ ಮೊದಲ ವುರ್ಮ್ ಹಿಮಯುಗ ಕೊನೆಗೊಳ್ಳುವವರೆಗೂ, ಅದು ರೂಢಿಯಲ್ಲಿತ್ತು. ಅಂದರೆ ಸುಮಾರು 1,50,000 ವರ್ಷಗಳ ಕಾಲ ಅದು ಅಸ್ತಿತ್ವದಲ್ಲಿತ್ತು; ಮತ್ತು ಸುಮಾರು 40,000 ವರ್ಷಗಳ ಹಿಂದೆ ಕೊನೆಗೊಂಡಿತು. ಆ ಕಾಲ ಯೂರೋಪಿನ ಬಹುಭಾಗಗಳಲ್ಲಿ ಆ ಮೊದಲಿನ ರಿಸ್ ಹಿಮಯುಗಕ್ಕಿಂತ ಬೆಚ್ಚಗಿತ್ತು. ಯೂರೋಪಿನ ವಾಯುಗುಣ ಜನವಸತಿಗೆ ಹೆಚ್ಚು ಆಕರ್ಷಕವಾಗಿತ್ತು. ಆದರೆ, ಆಫ್ರಿಕದ ಮಧ್ಯಭಾಗ ಉಷ್ಣಾಧಿಕ್ಯದಿಂದಾಗಿ ಮಾನವ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಸಹರಾ ಮರುಭೂಮಿ ಆಗ ಹುಟ್ಟಿಕೊಂಡಂತೆ ತೋರುತ್ತದೆ. ಆ ಕಾರಣದಿಂದ ಆಫ್ರಿಕದ ದಕ್ಷಿಣ ಭಾಗ ಇತರ ಜನವಸತಿ ಪ್ರದೇಶಗಳಿಂದ ಬೇರ್ಪಟ್ಟು ಆ ಪ್ರದೇಶಗಳ ಸಾಂಸ್ಕøತಿಕ ಬೆಳವಣಿಗೆಗಳ ಸಂಪರ್ಕ ಕಡಿದುಕೊಂಡಿತು. ಉತ್ತರ ಆಫ್ರಿಕ, ಪಶ್ಚಿಮ ಏಷ್ಯದೊಂದಿಗೂ ವಾಯುವ್ಯ ಆಫ್ರಿಕ ಸ್ಪೇನಿನೊಂದಿಗೂ ಸಂಪರ್ಕ ಉಳಿಸಿಕೊಂಡು ಯೂರೋಪಿನ ಸಂಸ್ಕøತಿಗಳೊಂದಿಗೆ ಸಂಪರ್ಕ ಉಳಿಸಿಕೊಂಡಿತು. 
ಈಮಿಯನ್ ಯುಗ ತೌಲನಿಕವಾಗಿ ಇತ್ತೀಚಿನದಾದರೂ ಆಗಿನ ಮಾನವರನ್ನು ಕುರಿತ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚು ತಿಳಿದುಬಂದಿಲ್ಲ. ಆದರೂ, ಆಗ ಬಹಳ ಮುಖ್ಯವಾದ ಘಟನೆಗಳು ಸಂಭವಿಸುತ್ತಿದ್ದುವು. ತಾಂತ್ರಿಕವಾಗಿ ಆಗ ನಿರ್ದಿಷ್ಟ ಕಾರ್ಯಗಳಿಗೆ ಉಪಯೋಗಿಸಬಹುದಾದ ಆಯುಧಗಳನ್ನು ಚಕ್ಕೆ ಕಲ್ಲುಗಳಿಂದ ಅಧಿಕ ಸಂಖ್ಯೆಯಲ್ಲಿ ತಯಾರಿಸಲಾಯಿತು. ಅವುಗಳ ತಯಾರಿಕೆಯಲ್ಲಿ ಹೊಸ ವಿಧಾನಗಳು ರೂಢಿಗೆ ಬಂದುವು. ಯೂರೋಪ್, ದಕ್ಷಿಣ ಆಫ್ರಿಕ ಮತ್ತು ಪೂರ್ವ ಏಷ್ಯಗಳಲ್ಲಿ ಪ್ರತ್ಯೇಕ ಮತ್ತು ಸ್ವತಂತ್ರವಾದ ಪದ್ಧತಿಗಳು ಅಸ್ತಿತ್ವದಲ್ಲಿದ್ದವು. ಚೀನದ ಹಳದಿ ನದಿಯ ದಡದಲ್ಲಿರುವ ಟಂಗ್‍ಸುನ್ ನೆಲೆಯಲ್ಲಿ ಪ್ರಾಚೀನ ಉಂಡೆಕಲ್ಲಿನ ಆಯುಧಗಳ ತಯಾರಿಕೆಯಿಂದ ಉದ್ಭವಿಸಿದ ಹೊಸ ತಾಂತ್ರಿಕ ವಿಧಾನಗಳು ಪಶ್ಚಿಮ ಯೂರೋಪಿನ ತಯಾರಿಕಾ ತಂತ್ರಗಳನ್ನು ಹೋಲುತ್ತಿದ್ದರೂ ಸ್ವತಂತ್ರವಾದುವೆಂದು ಹೇಳಲಾಗಿದೆ. ಆ ಬೆಳವಣಿಗೆ ಆವರೆಗಿನ ಪೂರ್ವ ಏಷ್ಯದ ಸಂಪ್ರದಾಯ ಪ್ರಿಯತೆಗೆ ವಿರುದ್ಧವಾಗಿದೆ. ಆಗ್ನೇಯ ಏಷ್ಯದಲ್ಲಿ ಹಿಂದಿನ ಪರಂಪರೆ ಮುಂದುವರೆಯಿತು. ಆಫ್ರಿಕ ಮತ್ತು ನೈಋತ್ಯ ಯೂರೋಪ್‍ಗಳಲ್ಲಿ ಅಷ್ಯೂಲಿಯನ್ ಸಂಸ್ಕøತಿಯ ಕೊನೆಯ ಹಂತದ ಆಯುಧ ರೀತಿಗಳು ಮುಂದುವರಿದರೂ ಚಕ್ಕೆ ಕಲ್ಲಿನ ಆಯುಧಗಳ ಮೌಸ್ಟೀರಿಯನ್ ರೀತಿಯ ಆಯುಧಗಳು ಹೆಚ್ಚಾಗಿ ಬಳಕೆಗೆ ಬಂದುವು. ಆ ಕಾಲದ ಮತ್ತೊಂದು ಪ್ರಮುಖ ಘಟನೆಯೆಂದರೆ ಅಷ್ಯೂಲಿಯನ್ ಸಂಸ್ಕøತಿಯ ಕರುಹುಗಳೂ ಪೂರ್ವದತ್ತ-ಮಧ್ಯ ಮತ್ತು ಪೂರ್ವ ಯೂರೋಪ್, ಬಾಲ್ಕನ್ ಪ್ರದೇಶಗಳಿಗೆ - ಹಬ್ಬಿದುವು. ಆ ಸಂಸ್ಕøತಿಗಳಲ್ಲಿ ದ್ವಿಮುಖವಾಗಿ ಚಕ್ಕೆಗಳನ್ನು ತೆಗೆದು ತಯಾರಿಸಿದ ಅಷ್ಯೂಲಿಯನ್ ಕೈಗೊಡಲಿಯ ರೀತಿಯ ಪುಟ್ಟ ಆಯುಧಗಳು ಬಳಕೆಗೆ ಬಂದುವು. ಅವುಗಳ ಜೊತೆಗೆ ಪೂರ್ವಯೋಜಿತ ಗಟ್ಟಿಗಳಿಂದ ತಯಾರಿಸಲಾದ ಚಕ್ಕೆ ಕಲ್ಲಿನ ಆಯುಧಗಳು ಕಾಣಿಸಿಕೊಳ್ಳುತ್ತವೆ.

ಈ ಎಲ್ಲ ಘಟನೆಗಳಿಂದ ಮಾನವಜೀವನಕ್ರಮದಲ್ಲೇ ಮೂಲಭೂತ ಬದಲಾವಣೆಗಳೇನೂ ಉಂಟಾದಂತೆ ಕಾಣುವುದಿಲ್ಲ. ಮೊದಲಿನ ಬೇಟೆಯ ವಿಧಾನಗಳು, ಅರಣ್ಯಜನ್ಯ ಉತ್ಪನ್ನಗಳ ಬಳಕೆ ಯಥಾವತ್ತಾಗಿ ಮುಂದುವರಿದುವು. ಆದರೆ, ಹೊಸ ಆಯುಧೋಪಕರಣ ಸಹಾಯದಿಂದ ಆ ಕಾರ್ಯಗಳನ್ನು ದಕ್ಷ ರೀತಿಯಲ್ಲಿ ನಿರ್ವಹಿಸುವಂತಾಯಿತು. ತತ್ಪಲವಾಗಿ ಹೊಸ ಪ್ರದೇಶಗಳಿಗೆ ಮಾನವ ಪ್ರವೇಶ ಆಯಿತು. ಯೂರೋಷಿಯದ ಉತ್ತರದ ಬಯಲಿನಲ್ಲಿ ಮೊತ್ತಮೊದಲಿಗೆ ಮಾನವ ನೆಲೆಸಿದ ಮತ್ತು ಮುಂದಿನ ಕಾಲದಲ್ಲಿ ಅಮೆರಿಕದತ್ತ ಮಾನವ ಹೋಗಲು ಹಾದಿ ಏರ್ಪಟ್ಟಿತು. ಈ ಹೊಸ ಪ್ರಸರಣದ ದಿಕ್ಕಿನಲ್ಲಿ ಜರ್ಮನಿಯ ವೈಮಾರ್ ಬಳಿಯ ಏರಿಂಗ್ಸ್‍ಡಾರ್ಫ್ ನೆಲೆಯಲ್ಲಿ ಸಿಕ್ಕಿರುವ ಅವಶೇಷಗಳು ಗಮನಾರ್ಹ. ವೈಮಾರಿಯನ್ ಎಂದು ಕರೆಯಲಾದ ಈ ಸಂಸ್ಕøತಿಯಲ್ಲಿ ಅಷ್ಯೂಲಿಯನ್ ಮತ್ತು ಹೊಸ ರೀತಿಯ ಕೂರಲಗು ಫಲಕದ ಚಾಕು, ಕೊರೆಯುಳಿ ಮುಂತಾದ, ಆಧುನಿಕ ಮಾನವ ಸಂಸ್ಕøತಿಯ, ಆಯುಧಗಳು ದೊರಕುತ್ತವೆ. ಅವುಗಳಲ್ಲಿ ಗಮನಾರ್ಹವಾದವೆಂದರೆ ಎಸೆಯುವ ಈಟಿಯಂಥ ಆಯುಧಗಳು. ಅವುಗಳಿಂದ ಬೇಟೆಯ ಕಾರ್ಯ ಸುಲಭವಾಯಿತು. 

ನಿಯಾಂಡರ್‍ತಲಾಯ್ಡ್ ಕಾಲದ ಉತ್ತರಾರ್ಧದ ಅಥವಾ ವುರ್ಮ್ ಹಿಮಯುಗದ ಮೊದಲ ಕಾಲದ ಮಾನವ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ. ಪ್ರಾಕ್ತನ ಅವಶೇಷಗಳು ಅಧಿಕ ಸಂಖ್ಯೆಯಲ್ಲಿ ದೊರಕಿರುವುದು ಮಾತ್ರವಲ್ಲದೆ ಅವುಗಳ ಕಾಲನಿರ್ಣಯವೂ ಹೆಚ್ಚು ನಿರ್ದಿಷ್ಟವಾಗಿ ಸಾಧ್ಯವಾಗುತ್ತದೆ. ಆಗಿನ ಮಾನವರು ಹೆಚ್ಚಾಗಿ ಪರ್ವತ ಗುಹೆಗಳಲ್ಲಿ ವಾಸಿಸುತ್ತಿದ್ದುದರಿಂದ ಅವರ ಅವಶೇಷಗಳು ಸುರಕ್ಷಿತ ಸ್ಥಿತಿಯಲ್ಲಿ ಉಳಿದು ಬಂದಿರುವುದು ಇದಕ್ಕೆ ಸಹಾಯಕವಾಗಿದೆ. ಆದರೆ ಆ ಜನ ಸಾಮಾನ್ಯವಾಗಿ ಗುಹೆಗಳಲ್ಲಿ ವಾಸಿಸುತ್ತಿದ್ದರೆಂದು ಭಾವಿಸಲಾಗದು. ಇತರೆಡೆಗಳಲ್ಲಿ ಆ ಕಾಲದ ಸಂಸ್ಕøತಿಗಳ ಕಾಲ ನಿರ್ಣಯ ಸ್ಪಷ್ಟವಾಗುವ ಲಕ್ಷಣಗಳು ಕಾಣುತ್ತಿವೆಯಾದರೂ ಪೂರ್ವ ಏಷ್ಯದ ಬಗ್ಗೆ ಎನೂ ನಿಖರವಾಗಿ ತಿಳಿದುಬಂದಿಲ್ಲ. ವುರ್ಮ್ ಹಿಮಯುಗದ ಮೊದಲ ಭಾಗದಲ್ಲಿ ವಾಯುಗುಣ ಬಹಳ ಬದಲಾಗುತ್ತಿತ್ತು ಮತ್ತು ಅದು ರಿಸ್ ಹಿಮಯುಗಕ್ಕಿಂತ ಶೀತದ್ದಾಗಿತ್ತು. ಉತ್ತರ ಯೂರೋಪ್ ಮತ್ತು ಎತ್ತರ ಪ್ರದೇಶಗಳು ಹಿಮಾಚ್ಛಾದಿತವಾಗಿದ್ದುವು. ಜನವಸತಿ ದಕ್ಷಿಣದತ್ತ ಸರಿಯುತ್ತಿತ್ತು. ಮೆಡಿಟರೇನಿಯನ್ ಪ್ರದೇಶ ಮತ್ತು ಪಶ್ಚಿಮ ಏಷ್ಯಗಳಲ್ಲಿ ಜನಸಾಂದ್ರತೆ ಹೆಚ್ಚಿತು. ದಕ್ಷಿಣ ಆಫ್ರಿಕ ಪ್ರತ್ಯೇಕವಾಗಿ ಉಳಿಯಿತು. ಆದರೆ ಯೂರೋಪಿನಲ್ಲಿ ಜನರು ಶೀತ ವಾಯುಗುಣಕ್ಕೆ ಮತ್ತು ಹೊಸ ಸನ್ನಿವೇಶಕ್ಕೆ ಹೊಂದಿಕೊಂಡು, ಆ ಪ್ರದೇಶಗಳಲ್ಲಿ ನೆಲೆಸಿದ್ದ ಅಧಿಕ ಸಂಖ್ಯೆಯ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದರು. ಹಿಮಯುಗದ ಕಾರಣದಿಂದ ಸಮುದ್ರ ಮಟ್ಟ ಕೆಳಗಿಳಿದು ಪ್ರಾಚೀನ ಮತ್ತು ಹೊಸ ಭೂಭಾಗಗಳ ನಡುವೆ ಸಂಪರ್ಕವೇರ್ಪಟ್ಟಿತು. ಇಂಡೋನೇಷ್ಯದ ವಿವಿಧ ದ್ವೀಪಗಳು ಒಂದುಗೂಡಿದುವು. ಈ ಹಿಮಯುಗದ ಅಂತ್ಯದ ವೇಳೆಗೆ ಆಧುನಿಕ ಮಾನವರು ಅಸ್ತಿತ್ವಕ್ಕೆ ಬಂದಿದ್ದರು. 

ಆವರೆಗೂ ಮಾನವ ವಸತಿಯಿಲ್ಲದ ಪ್ರದೇಶಗಳಿಗೆ ಮಾನವನ ಪ್ರವೇಶವಾದದ್ದು ಆ ಕಾಲದ ಮುಖ್ಯ ಸಂಗತಿ. ವೈಮಾರಿಯನ್ ಸಂಸ್ಕøತಿ ಆ ಘಟನೆಯ ಮೊದಲ ಹೆಜ್ಜೆ. ಈ ಮಾನವನ ವಸತಿ ವಿಸ್ತರಣೆ ದ್ವಿಮುಖವಾಗಿತ್ತು. ಪಶ್ಚಿಮ ಏಷ್ಯದ ಉತ್ತರಕ್ಕಿರುವ ಪರ್ವತಗಳ ಅಡಚಣೆಯನ್ನು ದಾಟಿ ಕ್ರಿಮಿಯ, ರಷ್ಯನ್ ತುರ್ಕಿಸ್ತಾನ, ಅಲ್ರ್ಟೈ ಪರ್ವತವಳಿ ಮತ್ತು ಮಂಗೋಲಿಯ ಪ್ರದೇಶಗಳನ್ನು ತಲುಪಿತ್ತು. ಆ ಎತ್ತರ ಪ್ರಸ್ಥಭೂಮಿಯಲ್ಲಿ ಮತ್ತು ಕುರುಚಲು ಗಿಡಗಳ ಕಾಡುಪ್ರದೇಶಗಳಲ್ಲಿ ಮೌಸ್ಟೀರಿಯನ್ ರೀತಿಯ ಆಯುಧೋಪಕರಣಗಳು ಪರಿಣಾಮಕಾರಿಯಾಗಿದ್ದುವು. ಈ ವಿಶಿಷ್ಟ ಬೇಟೆಗಾರಿಕೆಯ ಜೀವನ ಕ್ರಮ ಪ್ರಸರಿಸಿತು. ಗುಹೆಗಳಲ್ಲಿ ವಾಸ ಮಾಡದೆಯೇ ಅಧಿಕ ಶೀತ ವಾಯುಗುಣಕ್ಕೆ ಹೊಂದಿಕೊಳ್ಳುವ ಸಾಮಥ್ರ್ಯವನ್ನು ಅವರು ಪಡೆದಿದ್ದರು. ಅವರು ವಿಶಿಷ್ಟ ರೀತಿಯ ಮೂಳೆಯ ಆಯುಧಗಳನ್ನು ನಿರ್ಮಿಸಿಕೊಂಡಿದ್ದರು. ಆರಂಭದ ಮೂಳೆಯ ಆಯುಧಗಳು ಚೂಪಾದ ಮೊನೆಗಳು ಮತ್ತು ಪಿಕಾಸಿಯಂಥ ಕೊಡಲಿಗಳು. ಪ್ಲೀಸ್ಟೊಸೀನ್ ತರುವಾಯ ಪ್ರಸಿದ್ಧಿ ಹೊಂದಿದ ಲಿಂಗ್‍ಬಿ ಕೊಡಲಿ ಇವುಗಳ ಅವತಾರವಾಗಿತ್ತು. ಆ ಕಾಲದಲ್ಲಿ ಯೂರೋಪಿಯನ್ ರಷ್ಯ ಪ್ರದೇಶಗಳಲ್ಲಿ ಮೊದಲ ಬಾರಿಗೆ ಮಾನವ ವಾಸಿಸಲಾರಂಭಿಸಿದ. ಜನರು ಸೇಕಡ 88 ರಷ್ಟು ಶೀತವಲಯ ಪ್ರಾಣಿಗಳಾದ ಹಿಮಸಾರಂಗ ಮತ್ತು ಕೆಲವು ಜಾತಿಯ ದೊಡ್ಡ ಆನೆಗಳನ್ನು ಬೇಟೆಯಾಡಿ ತಿನ್ನುತ್ತಿದ್ದುದರಿಂದ ಅವರು ಶೀತ ವಲಯ ಪರಿಸರಕ್ಕೆ ಎಷ್ಟು ಹೊಂದಿಕೊಂಡಿದ್ದರೆನ್ನುವುದು ತಿಳಿಯುತ್ತದೆ. ಆಫ್ರಿಕದ ಮಧ್ಯ ಮತ್ತು ಪಶ್ಚಿಮ ಭಾಗಗಳ ಸಮಭಾಜಕವೃತ್ತ ಪ್ರದೇಶದ ದಟ್ಟಕಾಡು ಪ್ರದೇಶಗಳಲ್ಲಿ ನೆಲೆಸಿದ ಜನರು ಕಾಡುಗಳಲ್ಲಿ ಉತ್ಪತ್ತಿಯಾಗುತ್ತಿದ್ದ ಹಣ್ಣು, ಗೆಡ್ಡೆ, ಗೆಣಸು, ಜೇನು ಮುಂತಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಸೇವಿಸಿ ಜೀವಿಸುವುದರಲ್ಲಿ ನಿಷ್ಣಾತರಾದರು. ಅವರ ಸಂಸ್ಕøತಿಯನ್ನು ಸಂಗೋವನ್ ಎಂದು ಕರೆಯಲಾಗಿದೆ. ಈ ಸಂಸತಿಯಲ್ಲಿ ಉಳಿದ ಪ್ರದೇಶಗಳಲ್ಲಿ ಆ ಕಾಲದಲ್ಲಿ ಬಳಸುತ್ತಿದ್ದ ಹಗುರವಾದ ಆಯುಧಗಳ ಬದಲು ಭಾರವಾದ ಗಟ್ಟಿ ಕಲ್ಲಿನ ಕೊಡಲಿಗಳನ್ನು ಮತ್ತು ಪಿಕಾಸಿ ಕೊಡಲಿಗಳನ್ನು ಬಳಸುತ್ತಿದ್ದರು. ಸಹಾರ ಮರುಭೂಮಿಯ ಅಂಚಿನ ಬಯಲು ನಾಡುಗಳಲ್ಲಿ ವಾಸಿಸುತ್ತಿದ್ದ ಅಷ್ಯೂಲಿಯನ್ ಸಂಸ್ಕøತಿಯ ಉತ್ತರಾಧಿಕಾರಿಗಳು ಮೌಸ್ಟೀರಿಯನ್ ಸಂಸ್ಕøತಿಯನ್ನು ಹೋಲುವ ಪೌರಸ್ಮಿತ್ ಸಂಸ್ಕøತಿಯನ್ನು ರೂಢಿಗೆ ತಂದರು. ಸಂಗೋವನ್ ಜನರು ಆಫ್ರಿಕದ ದಟ್ಟ ಕಾಡುಗಳನ್ನೆಲ್ಲ ಕ್ರಮೇಣ ಆಕ್ರಮಿಸಿಕೊಂಡರು.

ಯೂರೋಪಿನ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ವೈವಿಧ್ಯಗಳುಳ್ಳ ಹಲವಾರು ಸಂಸ್ಕøತಿಗಳು ಹುಟ್ಟಿಕೊಂಡವು. ಬಯಲು ಪ್ರದೇಶಗಳ, ಪ್ರಗತಿ ಮಾರಕಗಳಾದ, ಪ್ರಸ್ಥಭೂಮಿಗಳ ಮತ್ತು ಶೀತದ ವಾಯುಗುಣಕ್ಕೆ ಹೊಂದಿಕೊಳ್ಳಲಾಗದ ಗುಹೆ-ಗುಹಾಮುಖಗಳಲ್ಲಿ ವಾಸಿಸುತ್ತಿದ್ದ, ವಿಭಿನ್ನ ಸಂಸ್ಕøತಿಗಳ ಮಾನವರು ತಮ್ಮವೇ ಆದ ವಿಶಿಷ್ಟ ಪದ್ಧತಿಗಳನ್ನು ರೂಪಿಸಿಕೊಂಡು ವೈವಿಧ್ಯಪೂರ್ಣವಾದ ಸಂಸ್ಕøತಿಗಳ ಸಮ್ಮಿಲನವನ್ನು ರೂಪಿಸಿಕೊಂಡಿದ್ದರು. ಕೆಲವರು ಕೈಗೊಡಲಿಗಳ ಬಳಕೆಯನ್ನು ಮುಂದುವರಿಸಿದರೆ, ಮತ್ತೆ ಕೆಲವರು ದ್ವಿಮುಖವಾಗಿ ಚಕ್ಕೆಗಳನ್ನು ತೆಗೆದು ನಿರ್ಮಿಸಿದ, ಎಲೆ ಆಕಾರದ, ಚೂಪಾದ ಮೊನೆ ಅಥವಾ ಬಾಕುಗಳನ್ನು ಇನ್ನು ಕೆಲವರು ಏಕಮುಖವಾಗಿ ಚಕ್ಕೆಗಳನ್ನು ತೆಗೆದು ಲೆವಾಲ್ವಾ ತಂತ್ರದಿಂದ ತಯಾರಿಸಿದ ಚಕ್ಕೆ ಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದರು. ಉತ್ತರ ಆಫ್ರಿಕದಲ್ಲಿ ಸಹ ಮೌಸ್ಟೀರಿಯನ್ ರೀತಿಯ ಹಲವು ಆಯುಧ ಪದ್ಧತಿಗಳು ರೂಢಿಯಲ್ಲಿದ್ದವು. ಈ ರೀತಿಯಲ್ಲಿ ಪ್ರಾಚೀನ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ವಿಸ್ತøತವಾದ ಸಾಂಸ್ಕøತಿಕ ಪ್ರಗತಿಪರವಾದ ಕ್ರಾಂತಿಯುಂಟಾಗಿ ವೈವಿಧ್ಯ ಕಾಣಬರುತ್ತದೆ. ಈ ಕ್ರಾಂತಿಕಾರಿ ಬದಲಾವಣೆಗಳಲ್ಲಿ ಯೂರೇಷಿಯ ಪ್ರದೇಶ ಕೇಂದ್ರ ಸ್ಥಾನವನ್ನು ಪಡೆದಿದೆ. ದಕ್ಷಿಣ ಆಫ್ರಿಕ ಭಾರತ ಮತ್ತು ಆಗ್ನೇಯ ಏಷ್ಯ ಪ್ರದೇಶಗಳಲ್ಲಿ ಇಂಥ ಪ್ರಗತಿ ಹೆಚ್ಚಾಗಿ ಕಾಣುವುದಿಲ್ಲ ಉತ್ತರದ ಬಯಲು ಪ್ರದೇಶಗಳಲ್ಲಿ ಸಂಭವಿಸಿದ ಮುನ್ನಡೆ ಉತ್ತರ ಚೀನಾದಲ್ಲೂ ಸಂಭವಿಸಿದ್ದಿರಬಹುದು. ಅಮೆರಿಕಕ್ಕೆ ಹಾದಿ ಆ ಕಾಲದಲ್ಲಿ ತೆರೆಯಿತು; ಬಹುಶಃ ಅಮೆರಿಕದ ಮೊದಲ ನಿವಾಸಿಗಳು ಚೀನದ ಟಿಂಗ್‍ಸುನ್ ನೆಲೆಯಲ್ಲಿ ದೊರಕುವಂಥ ಆಯುಧೋಪಕರಣಗಳನ್ನು ಬಳಸಿದ್ದಿರಬಹುದು; ಅದರಿಂದ ಮೊದಲ ಅಮೆರಿಕನ್ ನಿವಾಸಿಗಳು ನಿಯಾಂಡರ್‍ತಾಲ್ ಸಂತತಿಯವರಾಗಿದ್ದಿರಬಹುದು. 
ಹೋಮೋಸೇಪಿಯನ್ ಅಥವಾ ಆಧುನಿಕ ಮಾನವ ಸಂತತಿ ಎಲ್ಲಿ ಯಾವಾಗ ಉಗಮವಾಯಿತೆಂಬುದು ನಿರ್ದಿಷ್ಟವಾಗಿ ಇನ್ನೂ ತಿಳಿದಿಲ್ಲ; ಬಹುಶಃ ಭೂಮಿಯ ಬೇರೆ ಬೇರೆ ಪ್ರದೇಶಗಳಲ್ಲಿ ಇವರು ಒಂದೇ ಕಾಲದಲ್ಲಿ ಕಾಣಿಸಿಕೊಂಡಿದ್ದಿರಬಹುದು; ಅಥವಾ ಈವರೆಗೂ ನಂಬಿರುವಂತೆ ಒಂದು ಕಡೆ ಹುಟ್ಟಿ ವೇಗವಾಗಿ ಎಲ್ಲೆಡೆಗಳಿಗೂ ಪ್ರಸರಿಸಿರಬಹುದು. ದಕ್ಷಿಣ ಆಫ್ರಿಕ ಮತ್ತು ಬೋರ್ನಿಯೋಗಳಂಥ ದೂರ ಪ್ರದೇಶಗಳಲ್ಲಿ ಮೊದಲ ಬಾರಿಗೆ ದೊರಕಿರುವ ಆಧುನಿಕ ಮಾನವ ಪಳೆಯುಳಿಕೆಗಳನ್ನು ಇಂಗಾಲ-14 ಕಾಲಗಣನಪದ್ಧತಿಯ ರೀತ್ಯ 40,000 ವರ್ಷಗಳಿಗೆ ನಿರ್ದೇಶಿಸಲಾಗಿದೆ. ಬಹುಶಃ ಯೂರೋಪಿನಲ್ಲಿ ಆ ಸಂತತಿ ವುರ್ಮ್ ಹಿಮಯುಗದ ಆದಿಭಾಗದಲ್ಲಿ ಅಸ್ತಿತ್ವಕ್ಕೆ ಬಂತು. ಸಾಮಾನ್ಯವಾಗಿ ಅವರ ಸಂಸ್ಕøತಿಯ ಕಾಲ ಸುಮಾರು 3,00,000 ವರ್ಷಗಳು - ಎಂದರೆ ಕ್ರಿ. ಪೂ. 40,000 ದಿಂದ 10,000 ದ ನಡುವೆ ಅಸ್ತಿತ್ವದಲ್ಲಿದ್ದಿತ್ತೆಂದು ಭಾವಿಸಲಾಗಿದೆ. 
ಆದರೆ ಪ್ರಾರಂಭ ಕಾಲದಲ್ಲಿ ಭೂಮಿಯಲ್ಲಿ ಬೆಚ್ಚನೆಯ ವಾಯುಗುಣವಿತ್ತು. ಸುಮಾರು 15,000 ವರ್ಷಗಳ ಅನಂತರ ಬಹುಶಃ ಆ ಹಿಂದಿನ 5 ಲಕ್ಷ ವರ್ಷಗಳಲ್ಲಿ ಕಾಣದಷ್ಟು ಶೈತ್ಯಾಧಿಕ್ಯವಿದ್ದ ದ್ವಿತೀಯ ವುರ್ಮ್-ಹಿಮಯುಗ ತಲೆದೋರಿತು. ಆದರೆ ದಕ್ಷಿಣ ಭಾಗಗಳಲ್ಲಿ ಪಶ್ಚಿಮ ಏಷ್ಯ ಮತ್ತು ಉತ್ತರ ಆಫ್ರಿಕಗಳಲ್ಲಿ ಮರುಭೂಮಿ ಸದೃಶವಾದ ಮತ್ತು ಇತರ ಪ್ರದೇಶಗಳಲ್ಲಿ ಈಗಿರುವಂಥ ವಾಯುಗುಣವಿದ್ದು, ಸಮುದ್ರ ಮಟ್ಟ ಇಳಿದಿದ್ದುದರಿಂದ ಪ್ರಾಚೀನ ಅಮೆರಿಕದೊಂದಿಗೆ ಭೂ ಸೇತುವೆ ಇತ್ತು. ಜಪಾನ್ ಪ್ರತ್ಯೇಕವಾಗಿತ್ತು. ಇಂಡೊನೇಷ್ಯ ಈಗಿನಂತೆ ದ್ವೀಪಸ್ತೋಮವಾಗಿತ್ತು.

ಆ ಕಾಲದ ಆಧುನಿಕ ಮಾನವ ಸಂಸ್ಕøತಿಗಳ ಬಗ್ಗೆ ಆ ಮೊದಲಿಗಿಂತಲೂ ಹೆಚ್ಚು ಮಾಹಿತಿಗಳು ದೊರಕುತ್ತವೆ ಮತ್ತು ಅವುಗಳ ಕಾಲನಿರ್ಣಯವೂ ಹೆಚ್ಚು ನಿರ್ದಿಷ್ಟವಾಗಿದೆ. ಆ ಕಾಲದಲ್ಲಿ ಕದಡದ ಹಲವಾರು ನೆಲೆಗಳಿಂದ ಮಾಹಿತಿಗಳು ಸಿಕ್ಕಿರುವುದರಿಂದ ಆಗಿನ ಜನಜೀವನದ ಚಿತ್ರಣ ಹೆಚ್ಚು ಸ್ಪಷ್ಟಪಡುತ್ತದೆ. ಆದಾಗ್ಯೂ ಆಗ್ನೇಯ ಏಷ್ಯ ಮತ್ತು ಚೀನಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ತಿಳಿದುಬರುವುದಿಲ್ಲ. ಭಾರತದ ಸಂಸ್ಕøತಿಗಳ ಬಗ್ಗೆ ಇತ್ತೀಚಿಗೆ ಸ್ವಲ್ಪ ಮಾಹಿತಿಗಳು ದೊರಕಿದ್ದರೂ ಇನ್ನೂ ಅನೇಕ ವಿಷಯಗಳು ಅಸ್ಪಷ್ಟವಾಗಿವೆ. ಅಮೆರಿಕದಲ್ಲಿ 14,000 ವರ್ಷಗಳ ಹಿಂದಿನ ಮಾಹಿತಿಗಳೇನೂ ಸಿಕ್ಕಿಲ್ಲವಾದರೂ ಅನಂತರದ ಚಿತ್ರ ವಿಷದವಾಗುತ್ತದೆ. 

ಮಧ್ಯ ಮತ್ತು ಪೂರ್ವ ಯೂರೋಪಿನಲ್ಲಿ ಅಂತ್ಯಪೂರ್ವ ಶಿಲಾಯುಗ ಸಂಸ್ಕøತಿಗಳೆಂದು ಈವರೆಗೆ ಕರೆಯಲಾಗಿದ್ದ ಸಂಸ್ಕøತಿಗಳಲ್ಲಿ ಬಹಳಷ್ಟು ವೈವಿಧ್ಯಗಳು ಕಾಣಿಸಿಕೊಳ್ಳುತ್ತವೆ. ತಾಂತ್ರಿಕ ದೃಷ್ಟಿಯಿಂದ ಸ್ಥಳೀಯ ಲಕ್ಷಣಗಳು ಪ್ರಬಲಗೊಂಡು ಆಯಾ ಪ್ರದೇಶಗಳ ಆಯುಧ ರೀತಿಗಳಲ್ಲಿ ವೈಶಿಷ್ಟ್ಯಗಳು ಏರ್ಪಟ್ಟಿವೆ; ಮತ್ತು ಕೂರಲಗುಫಲಕಗಳ ಮೇಲೆ ರೂಪಿಸಿದ ಸಣ್ಣ ಗಾತ್ರದ ಆಯುಧಗಳು ಅಧಿಕವಾಗಿ ಬಳಕೆಗೆ ಬಂದುವು. ಕೂರಲಗುಫಲಕಗಳನ್ನು ಹೆಚ್ಚಿನ ಸಂಖ್ಯೆಯಲ್ಲ ತಯಾರಿಸಲು ಸಾಧಕವಾದ ಹೊಸ ರೀತಿಯ ಗಟ್ಟಿಗಳನ್ನು ತಯಾರಿಸುವ ಕಲೆ ರೂಢಿಗೆ ಬಂತು. ಈ ಹೊಸ ತಾಂತ್ರಿಕ ಪದ್ಧತಿಯಿಂದ ಹೆಚ್ಚಾಗಿ ಒಂದೇ ರೀತಿಯ ಕೂರಲಗುಫಲಕಗಳನ್ನು ಹೆಚ್ಚಾಗಿ ಸುಲಭವಾಗಿ ತಯಾರಿಸಲು ಸಾಧ್ಯವಾಗುತ್ತಿತ್ತು. ಅದರೊಂದಿಗೆ ಹೊಸದಾಗಿ ಉಪಜ್ಞಿಸಲಾದ ಕೊರೆಯುಳಿಯಿಂದ (ಬ್ಯೂರಿನ್) ಮೂಳೆ ಮತ್ತು ಮೆದು ಕಲ್ಲಿನಲ್ಲಿ ಕೊರೆದು ಹೊಸ ಆಯುಧಗಳನ್ನು ನಿರ್ಮಿಸಲು ಮತ್ತು ರೇಖಾಚಿತ್ರಗಳನ್ನು ಮೂಡಿಸಲು ಸಾಧ್ಯವಾಯಿತು. ಪ್ಲೀಸ್ಟೊಸೀನ್ ಯುಗದ ಅಂತ್ಯ ಭಾಗದಲ್ಲಿ ಕಲೆ ಬೆಳೆಯಲು ಕೊರೆಯುಳಿ ಏಕ ಮಾತ್ರ ಸಾಧನವಾಯಿತೆಂದರೆ ತಪ್ಪಾಗಲಾರದು. 

ಆ ಯುಗದ ಮೊದಲ ಭಾಗದಲ್ಲಿ ಇಡೀ ಯೂರೋಪಿನ ಮತ್ತು ಏಷ್ಯದ ಅನೇಕ ಭಾಗಗಳಲ್ಲಿ ಪ್ರಮುಖವಾಗಿ ರೂಢಿಯಲ್ಲಿದ್ದ ಆಧುನಿಕ ಮಾನವ ಸಂಸ್ಕøತಿಯನ್ನು ಆರಿಗ್ನಕಾಯಿಡ್ ಎಂದು ಕರೆಯಲಾಗಿದೆ. ಫ್ರಾನ್ಸಿನ ಆರಿಗ್ನಾಕ್ ಎಂಬಲ್ಲಿ ಮೊದಲಿಗೆ ಗುರ್ತಿಸಿದ್ದುದರಿಂದ ಅದನ್ನು ಆರಿಗ್ನೇಸಿಯನ್ ಸಂಸ್ಕøತಿಯೆಂದೂ ಅದರ ಸ್ಥಳೀಯ ವಾದ, ಆದರೆ, ಕೆಲವು ವ್ಯತ್ಯಾಸಗಳಿಂದ ಕೂಡಿರುವ, ಪ್ರಭೇದಗಳನ್ನು ಆರಿಗ್ನಕಾಯಿಡ್ ಸಂಸ್ಕøತಿಗಳೆಂದೂ ಕರೆಯಲಾಗಿದೆ. ಆ ಜನರು ಉತ್ತರ ಯೂರೋಪಿನ ಶೈತ್ಯಾಧಿಕ್ಯ ಪ್ರದೇಶಗಳಲ್ಲಿ ಅಲ್ಲಿರುವ ಶೀತವಲಯದ ಶೀಘ್ರಗತಿಯ ಪ್ರಾಣಿಗಳ ಬೇಟೆಗೆ ಸಹಾಯಕವಾದ ಎಸೆಯುವ ಆಯುಧಗಳನ್ನು ರೂಢಿಸಿಕೊಂಡಿದ್ದರು; ಜೊತೆಗೆ ಮೂಳೆಗಳಿಂದ ತಯಾರಿಸಿದ ಆಯುಧಗಳು ಹೆಚ್ಚು ಬಳಕೆಗೆ ಬಂದುವು. ಆ ಪ್ರದೇಶಗಳಲ್ಲಿ ಗಟ್ಟಿಯಾದ ಮರಗಳು ದೊರಕದಿದ್ದುದರಿಂದ ಮೂಳೆಯ ಆಯುಧಗಳು ಅನಿವಾರ್ಯವಾದುವು. ಕ್ರಮೇಣ ಆ ಸಂಸ್ಕøತಿಗಳ ಪ್ರಭಾವ ಪ್ರಸ್ಥಭೂಮಿ ಸಂಸ್ಕøತಿಗಳ ಮೇಲೂ ಕಾಣಬರುತ್ತದೆ. ದ್ವಿತೀಯ ವುರ್ಮ್ ಹಿಮಯುಗದ ಆರಂಭ ಕಾಲಕ್ಕೆ (25,000 ವರ್ಷಗಳ ಹಿಂದೆ) ಕಲ್ಲಿನಲ್ಲಿ ಮಾಡಿದ ಮೊನೆಯಾದ ಆಯುಧಗಳು ಕಣ್ಮರೆಯಾಗಿ ಸೂಕ್ಷ್ಮಗಾತ್ರದ, ಮೂಳೆಯ ಮೊನೆಯಾದ ಆಯುಧಗಳು ಎಲ್ಲೆಲ್ಲೂ ಬಳಕೆಗೆ ಬಂದವು. ಈ ನಡುವೆ ಕುತೂಹಲಕಾರಿಯಾದ, ಮತ್ತು ಹಿಂದಿನ ಯುಗದ ಮೌಸ್ಟೀರಿಯನ್ ಸಂಸ್ಕøತಿಯಿಂದ ಪ್ರಭಾವಿತವಾದ, ಸಾಲ್ಯೂಟ್ರಿಯನ್ ಸಂಸ್ಕøತಿ ಫ್ರಾನ್ಸಿನ ಕೆಲವು ಭಾಗಗಳಲ್ಲಿ ರೂಡಿಯಲ್ಲಿತ್ತು. 

ಈ ಎಲ್ಲ ಬೆಳವಣಿಗೆಗಳ ಫಲವಾಗಿ ಆ ಹಿಮಯುಗದಲ್ಲಿ ಯೂರೋಷಿಯದ ಬಯಲುಗಳಲ್ಲಿ ಮೂಳೆಯ ಮೊನೆಗಳುಳ್ಳ ಎಸೆಯುವ ಆಯುಧಗಳಿಂದ ಸನ್ನದ್ಧರಾದ ಬೇಟೆಗಾರರ ಪಂಗಡಗಳು ಪ್ರಬಲವಾದುವು. ಬೇಟೆಯ ಪ್ರಾಣಿಗಳಾಗಿ ಸೀಲ್ ಮತ್ತು ಇತರ ಜಾತಿಯ ಮೀನುಗಳು ಹೇರಳವಾಗಿ ದೊರಕುತ್ತಿದ್ದುವು. ಈ ಸುಲಭ ಜೀವನ ಕ್ರಮದಿಂದ ಸಾಕಷ್ಟು ವಿರಾಮ ಹೊಂದಿದ್ದ ಆ ಜನಜೀವನದಲ್ಲಿ ಕಲೆಯೇ ಮುಂತಾದ ಇತರ ಚಟುವಟಿಕೆಗಳನ್ನು. ಆರ್ಥಿಕೇತರ ಸಾಂಸ್ಕøತಿಕ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಯೂರೋಪಿನ ವಿವಿಧ ಭಾಗಗಳಲ್ಲಿ ಸ್ಥಳೀಯ ನಾಮಗಳಿಂದ ನಿರ್ದೇಶಿತವಾದ ಈ ರೀತಿಯ ಪ್ರತ್ಯೇಕ ಸಂಸ್ಕøತಿಗಳ ಸಬಲ ಖಚಿತ ಚಿತ್ರ ಕಂಡುಬರುತ್ತದೆ. ಉತ್ತರ ಏಷ್ಯದ ಮಂಗೋಲಿಯದ ಓರ್ಡಾಸ್ ಸಂಸ್ಕøತಿ ಈ ಗುಂಪಿಗೆ ಸೇರುತ್ತದೆ. ಸೈಬೀರಿಯ ಪ್ರಾಂತ್ಯದಿಂದ ಈ ಸಂಸ್ಕøತಿಯ ಪ್ರಭಾವ ಆಲಾಸ್ಯವನ್ನು ತಲುಪಿತು; ಆದರೆ, ಅಮೆರಿಕದ ಒಳಪ್ರದೇಶಗಳಿಗೆ ಆ ಪ್ರಭಾವಗಳು ಪ್ರವೇಶಿಸಲಿಲ್ಲ. ಬಹುಶಃ ತರುವಾಯದ ದಿನಗಳಲ್ಲಿ ಕೆಲವು ಲಕ್ಷಣಗಳು ಕ್ರಮೇಣ ಪ್ರವೇಶಿಸಿದುವು. ಫ್ರಾನ್ಸಿನ ಡಾರ್ಡಾನ್ ಪ್ರದೇಶದ ಅಂತ್ಯಪೂರ್ವಶಿಲಾಯುಗದ ಸಂಸ್ಕøತಿ ಆ ಕಾಲದ ಸಂಸ್ಕøತಿಯ ಮಾದರಿಯೆಂದು ಭಾವಿಸಲಾಗಿತ್ತು; ಆದರೆ, ಅದು ವೈವಿಧ್ಯಮಯವಾದ ಆ ಸಂಸ್ಕøತಿಯ ಒಂದಂಶವೆಂದು ಈಗ ಭಾವಿಸಬೇಕಾಗಿದೆ.

ಸ್ಥಳೀಯವಾದ ಪೆರಿಗಾರ್ಡಿಯನ್, ಗ್ರಾವೆಟಿಯನ್ ಮತ್ತು ಸಾಲ್ಯೂಟ್ರಿಯನ್ ಸಂಸ್ಕøತಿಗಳು ನೈಋತ್ಯ ಯೂರೋಪಿನಲ್ಲಿ ಕೆಲವು ಕಾಲ ಇದ್ದ ಅನಂತರ, ಆ ಯುಗದ ಅಂತ್ಯ ಭಾಗದಲ್ಲಿ ವಿಸ್ತಾರವಾಗಿ ಬೆಳೆದ ಮ್ಯಾಗ್ಡಲೀನಿಯನ್ ಸಂಸ್ಕøತಿ ಪಶ್ಚಿಮ ಯೂರೋಪಿನಾದ್ಯಂತ ಹಬ್ಬಿತು. ಅದು ವೈಶಿಷ್ಟ್ಯಪೂರ್ಣವೂ ಉಜ್ವಲವೂ ಆಗಿತ್ತು. ಆ ಸಂಸ್ಕøತಿಯಲ್ಲಿ ಮೂಳೆಯ ಅನೇಕ ರೀತಿಯ ಆಯುಧಗಳು ಹೇರಳವಾಗಿಯೂ ಕಲ್ಲಿನಾಯುಧಗಳು ಅಲ್ಪಸಂಖ್ಯೆಯಲ್ಲೂ ಉಪಯೋಗದಲ್ಲಿದ್ದುವಲ್ಲದೆ, ಅಸದೃಶ ರೇಖಾಚಿತ್ರ, ವರ್ಣಚಿತ್ರ ಮತ್ತು ಶಿಲ್ಪಕಲೆ ತಲೆದೋರಿದುವು. ಬೇಟೆ ಮತ್ತು ಸಂಗ್ರಹಣೆಗಳನ್ನು ಅವಲಂಬಿಸಿದ್ದ ಅವರ ಜೀವನ ರೀತಿಯ ಭವ್ಯ ಚಿತ್ರಣ ಅವುಗಳಿಂದ ಸಿಕ್ಕುತ್ತದೆ. ಅವರು ಸಾಮಾನ್ಯವಾಗಿ ಗುಹೆ ಮತ್ತು ಗುಹಾಮುಖಗಳಲ್ಲಿ ವಾಸಿಸುತ್ತಿದ್ದುದರಿಂದ ಅವರ ಕಲಾ ಸೃಷ್ಟಿ ಬಹುಮಟ್ಟಿಗೆ ಸುರಕ್ಷಿತವಾಗಿ ಉಳಿದುಬಂದಿದೆ. ಈ ಕಲೆಯ ಅವಶೇಷಗಳು ನೈಋತ್ಯ ಫ್ರಾನ್ಸ್ ಮತ್ತು ಸ್ಪೇನಿನ ಸುಣ್ಣಕಲ್ಲಿನ ಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ಉಳಿದುಬಂದಿವೆ. ಅನಂತರ ಕಾಲದಲ್ಲಿ ಸ್ಪೇನ್ ಮತ್ತು ಉತ್ತರ ಆಫ್ರಿಕಗಳಲ್ಲಿ ಇವು ಕಾಣಬರುತ್ತವೆ. 

ಯೂರೋಪ್ ಮತ್ತು ಉತ್ತರ ಏಷ್ಯದ ಹೊರಗೆ ಆರಿಗ್ನಕಾಯಿಡ್ ಸಂಸ್ಕøತಿಯ ಪ್ರಭಾವ ಬಹಳ ಸೀಮಿತವಾಗಿತ್ತು. ಪಶ್ಚಿಮ ಏಷ್ಯದಲ್ಲಿ ಅದು ಇತರ ಪ್ರತ್ಯೇಕ ಸಂಸ್ಕøತಿಗಳೊಂದಿಗೆ ಬೆರೆತಿತ್ತು. ಉತ್ತರ ಆಫ್ರಿಕದಲ್ಲಿ ಅದರ ಪ್ರಭಾವ ಬಹಳ ವಿರಳವಾಗಿತ್ತು. ಈಜಿಪ್ಟ್ ಪ್ರದೇಶದಲ್ಲಿ ಪೂರ್ವನಿಯೋಜಿತ ಗಟ್ಟಿಗಳಿಂದ ತೆಗೆದ ಚಕ್ಕೆ ಕಲ್ಲಿನ ಆಯುಧಗಳು ಮುಂದುವರಿದುವು; ಕೊನೆಗಾಲದಲ್ಲಿ ಅಲ್ಪಪ್ರಮಾಣದಲ್ಲಿ ಆ ಪ್ರಭಾವಗಳು ಕಾಣಿಸಿಕೊಂಡುವು. ವಾಯುವ್ಯ ಆಫ್ರಿಕದಲ್ಲಿ ಮೌಸ್ಟೀರಾಯಿಡ್ ಪ್ರಭಾವದಿಂದ ಹುಟ್ಟಿದ ಅಟರಿಯನ್ ಸಂಸ್ಕøತಿಯಲ್ಲಿ ಹಿಡಿಕೆಯೊಳಕ್ಕೆ ಸೇರುವ ಮುನ್‍ಚಾಚಿದ ಬುಡವಿದ್ದ ಮೊನೆಯಾದ ಆಯುಧಗಳು, ದ್ವಿಮುಖವಾಗಿ ಚಕ್ಕೆಗಳನ್ನು ತೆಗೆದ ಹೆರೆಯುವ ಆಯುಧಗಳು ಮತ್ತು ಚಾಕುಗಳು ಬಳಕೆಯಲ್ಲಿದ್ದುವು. ಬಯಲು ಪ್ರದೇಶಗಳಲ್ಲಿ ವಿಸ್ತøತವಾಗಿ ಹರಡಿದ ಅಟಿರಿಯನ್ ಸಂಸ್ಕøತಿ ಕೊನೆಯ ಹಿಮಯುಗದಲ್ಲಿ ಸಹಾರ ಮರುಭೂಮಿ ಪ್ರದೇಶದಲ್ಲಿ ಬಹಳ ಪ್ರಬಲವಾಗಿತ್ತು. ಕಡೆಗಾಲದಲ್ಲಿ ಬಿಲ್ಲುಬಾಣಗಳ ಉಪಯೋಗ ಹೆಚ್ಚಾದಾಗ ಬಾಣಗಳ ತುದಿಗೆ ಜೋಡಿಸುವ ಮೊನೆಗಳು ಆ ಸಂಸ್ಕøತಿಯ ವೈಶಿಷ್ಟ್ಯ ಎನಿಸಿಕೊಂಡುವು. ಬಿಲ್ಲುಬಾಣಗಳ ಉಪಯೋಗ ಮೊದಲಿಗೆ ಇಲ್ಲಿ ಅಸ್ತಿತ್ವಕ್ಕೆ ಬಂದು ತರುವಾಯ ಉಳಿದ ಪ್ರದೇಶಗಳಿಗೆ ವಿಸ್ತರಿಸಿದ್ದಿರಬಹುದು.

ಆಫ್ರಿಕದ ದಕ್ಷಿಣ ಭಾಗ, ಭಾರತ, ಆಗ್ನೇಯ ಮತ್ತು ಪೂರ್ವ ಏಷ್ಯ, ಆಸ್ಟ್ರೇಲಿಯ ಮತ್ತು ಅಮೆರಿಕ ತಮ್ಮದೇ ಆದ ಹಾದಿಯಲ್ಲಿ ಈ ಕಾಲದಲ್ಲಿ ಮುಂದುವರಿಯುತ್ತಿದ್ದುವು. ಪ್ರಪಂಚದ ಇತಿಹಾಸದಲ್ಲಿ ಸಂಭವಿಸುತ್ತಿದ್ದ ಪ್ರಮುಖ ಬದಲಾವಣೆಗಳು ಆ ಪ್ರದೇಶಗಳ ಮೇಲೆ ಗಮನಾರ್ಹ ಪ್ರಭಾವ ಬೀರಲಿಲ್ಲವೆನ್ನಬಹುದು; ಆ ಮೊದಲ ಚಕ್ಕೆಕಲ್ಲಿನ ಮತ್ತು ಕೊರಲಗು ಫಲಕಗಳ ಆಯುಧಗಳ ಉಪಯೋಗ ಮುಂದುವರಿಯುತ್ತಿದ್ದು ಕ್ರಮೇಣ ಪ್ಲೀಸ್ಟೊಸೀನ್ ಯುಗಾನಂತರದ ಸೂಕ್ಷ್ಮ ಶಿಲಾಯುಧಗಳ ಬಳಕೆಯತ್ತ ಹೊರಳಿದಂತೆ ಕಾಣುತ್ತದೆ. ಆದರೆ ಮಾನವ ಸಂಸ್ಕøತಿಯ ಮುನ್ನಡೆಯಲ್ಲಿ ಆ ಪ್ರದೇಶಗಳು ತಮ್ಮದೇ ರೀತಿಯಲ್ಲಿ ಪಾತ್ರ ವಹಿಸಿದೆಯೆಂಬುದರಲ್ಲಿ ಸಂದೇಹವಿಲ್ಲ.

ಪುರಾತನ ಶಿಲಾಯುಗದ ಸಂಸ್ಕøತಿ ಸಾಧನೆಯ ಇತಿಹಾಸದಲ್ಲಿ ಈಗಿನ ಮಾನವ ಸಮಾಜ ಸಂಸ್ಕøತಿಗಳೊಂದಿಗೆ ಹೆಚ್ಚಿನ ಸಾಮ್ಯಗಳನ್ನು ಕಾಣುವ ಹಂತವನ್ನು ನಾವು ತಲುಪಿದ್ದೇವೆ. ಆಧುನಿಕ ಅಥವಾ ಕ್ರೋಮ್ಯಾಗ್ನನ್ ಅಥವಾ ಹೋಮೊಸೇಪಿಯನ್ ಸಂತತಿ ನಿರ್ಮಿಸಿದ ಜೀವನ ರೀತಿ, ಕಲಾ ಪರಂಪರೆ ಇವು ನಮ್ಮ ಸಮಾಜ ಜೀವನದ ಸಂಸ್ಕøತಿಯ ವಿವಿಧ ಅಂಶಗಳನ್ನು ಬಹುವಾಗಿ ಹೋಲುತ್ತವೆ. ಆ ಯುಗದ ಅಂತ್ಯದಲ್ಲಿ ಜೀವನಕ್ರಮದಲ್ಲಿ ಬದಲಾವಣೆಗಳು ತ್ವರಿತಗತಿಯಲ್ಲಿ ಸಂಭವಿಸಿದುವು. ಆಯುಧ ರೀತಿಯಲ್ಲಿ ಸುಧಾರಣೆಯುಂಟಾಗಿ, ಹೊಸ ತಂತ್ರಗಳ ಪ್ರಯೋಗದಿಂದ ಹೆಚ್ಚು ಪ್ರಯೋಜನಕಾರಿಯಾದ ಭಲ್ಲೆ, ಬಿಲ್ಲುಬಾಣ ಮತ್ತು ಕೊರೆಯುಳಿಗಳಂಥ ಶಿಲಾಯುಧಗಳ, ಸೂಜಿ, ಭೈರಿಗೆ ಮುಂತಾದ ಮೂಳೆಯ ಆಯುಧಗಳ ಬಳಕೆ ಸಾಮಾನ್ಯವಾದುದರಿಂದ ಸುಲಭ ರೀತಿಯಲ್ಲಿ ಮಾನವ ತನ್ನ ಆಹಾರವನ್ನು ಪಡೆಯಲು ಸಾಧ್ಯವಾಯಿತು. ವಾಯುಗುಣದಲ್ಲಿ ತೀವ್ರ ಮಾರ್ಪಾಟುಗಳಾಗುತ್ತಿದ್ದರೂ ಮಾನವ ತನ್ನ ಪರಿಸರಕ್ಕೆ ಸುಲಭವಾಗಿ ಹೊಂದಿಕೊಂಡು ಬೆಟ್ಟಗಳ, ದಟ್ಟ ಕಾಡುಗಳ, ಬಯಲು ಹುಲ್ಲುಗಾವಲುಗಳ ಅಥವಾ ಪ್ರಸ್ಥಭೂಮಿಗಳ ವಾತಾವರಣದಲ್ಲಿ ಜೀವಿಸುವ ಕಲೆಯನ್ನು ವಶವಾಗಿಸಿಕೊಂಡ. ಕೆಲವು ಪ್ರದೇಶಗಳ ಮಾನವರು ವಿಶೇಷ ಚಾತುರ್ಯವನ್ನು ಬೆಳೆಸಿಕೊಂಡು ಹಿಮಯುಗಗಳ ತರುವಾಯದ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ವಿನಷ್ಟಗೊಂಡರು. ಮತ್ತೆ ಕೆಲವು ಪಂಗಡಗಳವರು ಹೆಚ್ಚು ವೈಶಿಷ್ಟ್ಯವನ್ನು ಬೆಳೆಸಿಕೊಳ್ಳದಿದ್ದುದರಿಂದ ಬದಲಾಗುತ್ತಿದ್ದ ಪರಿಸರಕ್ಕೆ ಸುಲಭವಾಗಿ ಹೊಂದಿಕೊಂಡು ಅನಂತರ ಕಾಲದ ಆಹಾರೋತ್ಪಾದಕ ಮಾನವ ಸಮಾಜಗಳ ವಿಕಾಸಕ್ಕೆ ಮೂಲವಾದರು.												  (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ